ಸುಳ್ಯದಲ್ಲಿ ಶಿಕ್ಷಕರ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Update: 2016-09-06 12:48 GMT

ಸುಳ್ಯ, ಸೆ.6: ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ವತಿಯಿಂದ ಶಿಕ್ಷಕರ ದಿನಾಚರಣೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರು ಸಮಾಜವನ್ನು ತಿದ್ದುವವರು. ಅವರ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಎಂದವರು ಹೇಳಿದರು.

ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಕರು ವೃತ್ತಿ ಬದ್ಧತೆ, ವೈಯಕ್ತಿಕ ಚಾರಿತ್ರ್ಯ ಹೊಂದಿರಬೇಕು. ಉದಾಹರಣೆಗೆ ಮಾದರಿಯಾಗಿರಬೇಕು. ನಿರಂತರ ಅಧ್ಯಯನ ಮಾಡಬೇಕು. ವ್ಯಕ್ತಿಯೊಬ್ಬ ಸಮಾಜ ಆಸ್ತಿಯಾಗುವಂತೆ ಸಂಸ್ಕಾರವನ್ನು ಪಾಲನೆ ಮಾಡುವ ರೀತಿಯಲ್ಲಿ ಬೋಧಿಸಬೇಕು. ಶಿಕ್ಷಕರಿಗೆ ಸಮಾಜ ಎಲ್ಲವನ್ನೂ ನೀಡಿದ್ದು, ಅದಕ್ಕೆ ಋಣಿಯಾಗಿರಬೇಕು ಎಂದವರು ಹೇಳಿದರು.

ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮಹತ್ವ ತಿಳಿದು ಆಚರಿಸಬೇಕು. ಹಿನ್ನೆಲೆ, ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡರೆ ಬದಲಾವಣೆ ತರಲು ಸಾಧ್ಯವಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಸದಸ್ಯೆ ಪುಷ್ಪಾವತಿ ಬಾಳಿಲ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಅತಿಥಿಗಳಾಗಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತೀರ್ಥರಾಮ ಅಡ್ಕಬಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು, ವೇದಿಕೆಯಲ್ಲಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ ಸ್ವಾಗತಿಸಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ಟಿ.ವೀಣಾ ವಂದಿಸಿದರು. ಲಿಂಗಪ್ಪ ಬೆಳ್ಳಾರೆ, ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ನಿವೃತ್ತ ಹಿರಿಯ ಶಿಕ್ಷಕರಾದ ವಾಸಪ್ಪ ಗೌಡ ಬಳ್ಳಡ್ಕ, ಸರೋಜಿನಿ ಕಲ್ಲುಗದ್ದೆ, ಎ.ಆರ್.ಗಾಯತ್ರಿ, ಕೆ.ಲವಾ, ಎಚ್.ಲಿಂಗಪ್ಪ ಗೌಡ, ಎ.ಪುಟ್ಟಣ್ಣ ಗೌಡ, ಬಿ.ಯಶೋಧಾ, ಎನ್.ಕೆ.ಭುವನೇಶ್ವರಿ, ಎನ್.ಬಾಬು, ಬಾಲಕೃಷ್ಣ, ಗೀತಾ, ಚಂದ್ರಶೇಖರ ಭಟ್, ಅಬ್ದುಲ್ಲ, ಜವಾನ ಇಸುಬು ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪುರಂದರ ನಾರಾಯಣ ಭಟ್, ಜಿಲ್ಲಾ ಪ್ರಶಸ್ತಿ ಪಡೆದ ಡಿ.ಪದ್ಮಾರನ್ನು ಸನ್ಮಾನಿಸಲಾಯಿತು.

ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ದುಗ್ಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿನಿ ಆಶ್ರಿತಾ, ಶಿಕ್ಷಣ ಪೋಷಕ ಹಾಗೂ ದಾನಿ ರವಿಪ್ರಕಾಶ್ ಅಟ್ಲೂರು ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News