ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು: ರೈತ ಸಂಘ ಹಸಿರು ಸೇನೆ ಮನವಿ
ಪುತ್ತೂರು, ಸೆ.6: ರಾಜ್ಯ ಸರಕಾರವು ಕಾವೇರಿ ನದಿಯ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡು ರಾಜ್ಯಕ್ಕೆ ಬಿಡಬಾರದು ಎಂದು ರಾಜ್ಯ ರೈತಸಂಘ ಹಸಿರುಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಪುತ್ತೂರು ತಹಶೀಲ್ದಾರರ ಮೂಲಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಉಪವಿಭಾಗಾಧಿಕಾರಿ ಕಚೇರಿ ಎದುರು ಮನವಿ ಸಲ್ಲಿಸುವ ಮೊದಲು ಮಾತನಾಡಿದ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ನಮ್ಮ ರಾಜ್ಯವು ತೀವ್ರ ಬರಗಾಲದಿಂದ ತತ್ತರಿಸಿದ್ದು, ರಾಜ್ಯದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಬಂದಿದ್ದರೂ ಸುಪ್ರೀಂ ಕೋರ್ಟು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ. ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ತಮಿಳುನಾಡಿನ ವಕೀಲರೊಬ್ಬರನ್ನು ನೇಮಿಸುವ ಮೂಲಕ ತಮಿಳುನಾಡಿಗೆ ವರವಾಗುವಂತೆ ಮಾಡಿರುವುದು ಸರಿಯಲ್ಲ ಎಂದರು.
ಸರಕಾರ ಈ ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಕಾವೇರಿ ನೀರಿನ ವಿಚಾರದಲ್ಲಿ ಮಂಡ್ಯ ಜನತೆಯ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಘೋಷಿಸಿದರು.
ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಡಿಲ ಈಶ್ವರ ಭಟ್, ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಪಾಲೆಚ್ಚಾರು ಈಶ್ವರ ಗೌಡ ಮತ್ತು ಧನಂಜಯ ರೈ, ತಾಲೂಕು ಹಸಿರುಸೇನೆ ಘಟಕದ ಸಂಚಾಲಕ ವಿನೋದ್ ಶೆಟ್ಟಿ ಮೈಂದನಡ್ಕ, ಸವಣೂರು ವಲಯಾಧ್ಯಕ್ಷ ಹೊನ್ನಪ್ಪಗೌಡ ಪರಣೆ, ಕುಂಬ್ರ ವಲಯಾಧ್ಯಕ್ಷ ಶೇಖರ್ ರೈ, ಪದಾಧಿಕಾರಿಗಳಾದ ವಸಂತ ಗೌಡ ಕುಂತೂರು, ಸೀತಾರಾಮ ರೈ ಕಲಾಯಿ, ಶಿವರಾಮ ರೈ ಬಳಜ್ಜ, ಮುಹಮ್ಮದ್ ಮಾಣಿಲ ಮತ್ತಿತರರು ಇದ್ದರು.
ತಹಶೀಲ್ದಾರ್ ಪುಟ್ಟ ಶೆಟ್ಟಿ ಮನವಿ ಸ್ವೀಕರಿಸಿದರು.