ಸುಳ್ಯ: ಸ್ಕಾರ್ಫ್ ಧರಿಸುವ ಅವಕಾಶ ನೀಡಲು ಕ್ಯಾಂಪಸ್ ಫ್ರಂಟ್ ಆಗ್ರಹ

Update: 2016-09-06 13:21 GMT

ಸುಳ್ಯ, ಸೆ.6: ಪೆರುವಾಜೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕಾರ್ಫ್-ಕೇಸರಿ ಶಾಲು ವಿವಾದ ಹಾಗೇ ಮುಂದುವರಿದಿದ್ದು, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್‌ನ ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲಾ, ವಿ.ವಿ.ಯ ನಿಯಮಗಳನ್ನು ಪಾಲಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದರು.

ಸಂವಿಧಾನದ ಅನುಚ್ಛೇದ 25ರ ಪ್ರಕಾರ ಧರ್ಮ ಮತ್ತು ಧಾರ್ಮಿಕ ನಂಬಿಕೆಯನ್ನು ಪಾಲಿಸುವ ಅವಕಾಶವಿದೆ. ವಿ.ವಿ.ಯ ನಿಯಮಾವಳಿಯಲ್ಲಿಯೂ ಅದಕ್ಕೆ ಅವಕಾಶವಿದೆ. ಆದರೆ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕ್ಷುಲ್ಲಕ ಕಾರಣ ನೀಡಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ವಿಚಾರದಲ್ಲಿ ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದವರು ಆರೋಪಿಸಿದರು.

ಪೆರುವಾಜೆ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕನ್ನು ಮೊಟಕು ಮಾಡುವ ಉದ್ದೇಶ ಇದರ ಹಿಂದೆ ಅಡಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದವರು ಹೇಳಿದರು.

ಸಮಿತಿ ಸದಸ್ಯ ರಿಯಾಝ್, ತಾಲೂಕು ಘಟಕದ ಅಧ್ಯಕ್ಷ ರಶೀದ್, ಕಾರ್ಯದರ್ಶಿ ಮುಜಾದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News