ಡಿವೈಎಫ್‌ಐನಿಂದ ಶಿಕ್ಷಕರ ದಿನಾಚರಣೆ
ಮಂಗಳೂರು, ಸೆ. 6: ಡಿವೈಎಫ್‌ಐ ಶಕ್ತಿನಗರ ಘಟಕದ ನೇತೃತ್ವದಲ್ಲಿ ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ ಮತ್ತು ಆಭಿನಂದನಾ ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಯೋಜನಾಧಿಕಾರಿ ವಾಸುದೇವ ಉಚ್ಚಿಲ ಮಾತನಾಡಿ, ನನಗೂ ಸರಕಾರಿ ಶಿಕ್ಷಕ ವೃತ್ತಿಯ ಅನುಭವವಿದ್ದು ಶಿಕ್ಷಕರ ಸ್ಥಿತಿಗಳನ್ನು ಮನಗಂಡವನು. ಈಗಿನ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಸರಕಾರಿ ಶಾಲೆಯನ್ನು ಕಡೆಗಣಿಸಿರುವ ಸರಕಾರ ಗುಣಮಟ್ಟದ ಶಿಕ್ಷಣವನ್ನು ನೀಡುವ ವ್ಯವಸ್ಥೆಯಲ್ಲಿ ವಿಫಲವಾಗಿದೆ. ಇಂತಹ ಸ್ಥಿತಿಯಲ್ಲೂ ಸರಕಾರಿ ಶಾಲೆಯ ಶಿಕ್ಷಕ ವೃಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್ ಸಂಘದ ಕಾರ್ಯದರ್ಶಿ ದೇವಾನಂದ್ ಮಾತನಾಡಿ, ನಾನೂ ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ನಾನು ಈ ಹಂತಕ್ಕೇರಲು ಸಾಧ್ಯವಾಗಿರುವುದು ಈ ಶಾಲೆಯ ಶಿಕ್ಷಕರಿಂದಾಗಿ. ನಾನು ಅವರಿಗೆ ಅಭಾರಿಯಾಗಿರುತ್ತೇನೆ. ವಿದ್ಯಾರ್ಥಿಗಳು ನಮಗೆ ಕಲಿಸಿದಂತಹ ಶಿಕ್ಷಕರನ್ನು ಗೌರವಿಸುವಂತಹ ಗುಣವನ್ನು ಮೈಗೂಡಿಸಬೇಕೆಂದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಮಂಗಳೂರು ನಗರ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಕಟ್ಟಡ ಕಾರ್ಮಿಕರ ಸಂಘದ ನಗರ ಅಧ್ಯಕ್ಷ ಸಂತೋಷ್ ಶಕ್ತಿನಗರ ಮಾತನಾಡಿದರು.
ಡಿವೈಎಫ್‌ಐ ಶಕ್ತಿನಗರ ಕಾರ್ಯದರ್ಶಿ ಮೋಹನ್ ಕಾನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಘಟಕದ ಅಧ್ಯಕ್ಷ ಮೋಹನ್ ಬೊಲ್ಯ ವಂದಿಸಿದರು.