ಪ್ರಾಣಿಹಿಂಸೆ: ಜಾನುವಾರುಗಳನ್ನು ಮರಳಿಸಲು ನ್ಯಾಯಾಲಯದ ನಕಾರ

Update: 2016-09-06 14:31 GMT

ಹೊಸದಿಲ್ಲಿ,ಸೆ.6: ಲಾರಿಯಲ್ಲಿ ಕಸಾಯಿಖಾನೆಗೆ ಸಾಗಾಣಿಕೆಯಾಗುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡಿದ್ದ ಜಾನುವಾರುಗಳನ್ನು ಮಾಲಕನಿಗೆ ಮರಳಿಸಲು ನಿರಾಕರಿಸಿರುವ ದಿಲ್ಲಿಯ ಸೆಷನ್ಸ್ ನ್ಯಾಯಾಲಯವು, ಈ ಜಾನುವಾರುಗಳನ್ನು ಅತ್ಯಂತ ಕ್ರೂರ ಮತ್ತು ಅಮಾನವೀಯ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಬೆಟ್ಟು ಮಾಡಿದೆ.

ರಾಜಸ್ಥಾನದ ನಿವಾಸಿ ಜಗದೀಶ ಬಂಜಾರಾ ಎಂಬಾತ ಸಾಗಿಸುತ್ತಿದ್ದ 25 ಕೋಣಗಳು ಮತ್ತು ಕರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಪೈಕಿ ಎಂಟು ಸಾವನ್ನಪ್ಪಿದ್ದವು. ಅವುಗಳ ಬಿಡುಗಡೆಯನ್ನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಜಾನುವಾರುಗಳನ್ನು ರಕ್ಷಣೆಗಾಗಿ ಸಂಜಯ ಗಾಂಧಿ ಪಶು ರಕ್ಷಣೆ ಕೇಂದ್ರಕ್ಕೆ ಒಪ್ಪಿಸುವಂತೆ ಆದೇಶಿಸಿತು.

ಜೂ.22ರಂದು ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದ ಪೊಲೀಸರು ಬಂಜಾರಾ ವಿರುದ್ಧ ಪಶು ಕ್ರೌರ್ಯ ತಡೆ ಕಾಯ್ದೆ,1960 ಮತ್ತು ಐಪಿಸಿಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಜಾನುವಾರುಗಳ ಬಿಡುಗಡೆಯನ್ನು ಕೋರಿ ಬಂಜಾರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಜು.1ರಂದು ವಜಾಗೊಳಿಸಿತ್ತು. ಬಳಿಕ ಆತ ಸೆಷನ್ಸ್ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News