ಕಾಶ್ಮೀರದಲ್ಲಿ ಮತ್ತೆ ಘರ್ಷಣೆ, ಯುವಕ ಬಲಿ : ಮೃತರ ಸಂಖ್ಯೆ 73ಕ್ಕೇರಿಕೆ
ಶ್ರೀನಗರ,ಸೆ.6: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸೀರ್ ಹಮ್ದಾನ್ ಪ್ರದೇಶದಲ್ಲಿ ಇಂದು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಹೊಸದಾಗಿ ಘರ್ಷಣೆಗಳು ನಡೆದಿದ್ದು, ಯುವಕನೋರ್ವ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 73ಕ್ಕೇರಿದೆ. ಸತತ 60ನೇ ದಿನವಾದ ಮಂಗಳವಾರವೂ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ನಸೀರ್ ಅಹ್ಮದ್ ಮೀರ್ ಮೃತ ಯುವಕ. ಓರ್ವ ಮಹಿಳೆ ಸೇರಿದಂತೆ ಇತರ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ರವಿವಾರ ಬಾರಾಮುಲ್ಲಾ ಜಿಲ್ಲೆಯ ಸೋಪೊರ್‌ನಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾಪಡೆಗಳ ನಡುವಿನ ಘರ್ಷಣೆಗಳಲ್ಲಿ ಗಾಯಗೊಂಡಿದ್ದ ಮುಸೈಬ್ ನಾಗೂ ಎಂಬಾತ ಕಳೆದ ರಾತ್ರಿ ಇಲ್ಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಏಳು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎರಡು ದಿನಗಳ ಹಿಂದೆಯೇ ಕರ್ಫ್ಯೂವನ್ನು ಹಿಂದೆಗೆದು ಕೊಳ್ಳಲಾಗಿದ್ದರೂ ಪ್ರತ್ಯೇಕತಾವಾದಿಗಳು ಸೆ.8ರವರೆಗೆ ಕರೆ ನೀಡಿರುವ ಬಂದ್‌ನಿಂದಾಗಿ ಸಾಮಾನ್ಯ ಜನಜೀವನ ಸ್ಥಗಿತಗೊಂಡಿದೆ.
ಇಡೀ ಶ್ರೀನಗರದಲ್ಲಿ ಕರ್ಫ್ಯೂ ಹಿಂದೆಗೆದುಕೊಳ್ಳಲಾಗಿದ್ದು,ಮಂಗಳವಾರ ಕಾಶ್ಮೀರದ ಯಾವುದೇ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿಲ್ಲ. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸ್ ವಕ್ತಾರರೋರ್ವರು ತಿಳಿಸಿದರು.