ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಎತ್ತಂಗಡಿ
ಉಡುಪಿ, ಸೆ.6: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ಎದುರಿಸಿದ್ದ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಅವರನ್ನು ಉಡುಪಿ ಡಿಸಿಬಿ ಪೊಲೀಸ್ ನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿಳಂಬ ತನಿಖೆ ಹಾಗೂ ಆರೋಪಿ ಗಳಿಗೆ ರಾಜ್ಯಾತಿಥ್ಯ ನೀಡಿರುವ ಬಗ್ಗೆ ಗಿರೀಶ್ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಎಸ್ಪಿ ಆದೇಶಿಸಿದ್ದರು. ಅದರಂತೆ ಹೆಚ್ಚುವರಿ ಎಸ್ಪಿ ವಿಷ್ಣುವರ್ದನ್ ಇಲಾಖಾ ವಿಚಾರಣೆಯನ್ನು ನಡೆಸಿ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಗಿರೀಶ್ ಮಣಿಪಾಲ ನಿರೀಕ್ಷಕರಾಗಿ ಮುಂದುವರೆಯುವುದು ಸೂಕ್ತ ಅಲ್ಲ ಎಂಬ ಎಸ್ಪಿಯ ಶಿಫಾರಸ್ಸಿನಂತೆ ಮಂಗಳೂರು ಪಶ್ಚಿಮ ವಲಯ ಐಜಿಪಿ ಗಿರೀಶ್‌ರನ್ನು ಮೂರು ದಿನಗಳ ಹಿಂದೆ ಡಿಸಿಬಿ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದೀಗ ಮಣಿಪಾಲ ಪೊಲೀಸ್ ನಿರೀಕ್ಷಕರಾಗಿ ಡಿಸಿಬಿ ನಿರೀಕ್ಷಕರಾಗಿದ್ದ ಸಂಪತ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕೂಡ ಗಿರೀಶ್ ವಿರುದ್ಧದ ದೂರಿನ ಕುರಿತು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ವರದಿಯನ್ನು ಅವರು ಸರಕಾರಕ್ಕೆ ಸಲ್ಲಿಸಲಿದ್ದಾರೆ.