ಪ್ರಧಾನಿಗೆ ಕಾಶ್ಮೀರ ಪರಿಸ್ಥಿತಿ ವಿವರಿಸಿದ ರಾಜ್‌ನಾಥ್

Update: 2016-09-06 16:57 GMT

ಹೊಸದಿಲ್ಲಿ,ಸೆ.6: ಎರಡು ದಿನಗಳ ಜಮ್ಮುಕಾಶ್ಮೀರ ಭೇಟಿಯ ಬಳಿಕ ಮಂಗಳವಾರ ಹೊಸದಿಲ್ಲಿಗೆ ವಾಪಸಾಗಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಣಿವೆ ರಾಜ್ಯದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
 ಸುಮಾರು ಒಂದು ತಾಸು ಕಾಲ ನಡೆದ ಮಾತುಕತೆಯಲ್ಲಿ ಸೆಪ್ಟೆಂಬರ್ 4 ಹಾಗೂ 5ರಂದು ಶ್ರೀನಗರ ಹಾಗೂ ಜಮ್ಮುವಿಗೆ ಸರ್ವಪಕ್ಷ ನಿಯೋಗದ ಭೇಟಿಯ ವಿವರಗಳನ್ನು ಕೂಡಾ ಗೃಹ ಸಚಿವರು ಪ್ರಧಾನಿಗೆ ನೀಡಿದರು.
 ಪ್ರಧಾನಿ ನರೇಂದ್ರ ಮೋದಿ ಚೀನಾ ಹಾಗೂ ವಿಯೆಟ್ನಾಂ ಪ್ರವಾಸ ಮುಗಿಸಿ, ಸೋಮವಾರ ರಾತ್ರಿ ಹೊಸದಿಲ್ಲಿಗೆ ಆಗಮಿಸಿದ್ದರೆ, ಗೃಹ ಸಚಿವ ರಾಜ್‌ನಾಥ್ ಸಿಂಗ್ ಕೂಡಾ ಸೋಮವಾರ ಸಂಜೆ ಶ್ರೀನಗರದಿಂದ ಹಿಂತಿರುಗಿದ್ದರು.ಸರ್ವಪಕ್ಷ ನಿಯೋಗದ ಸದಸ್ಯರು ಬುಧವಾರ ಸಭೆ ಸೇರಿ ಕಾಶ್ಮೀರ ಭೇಟಿಯ ವೇಳೆ ತಾವು ಕಂಡುಕೊಂಡ ಅಂಶಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

ಕಾಶ್ಮೀರಿ ಪ್ರತ್ಯೇಕವಾದಿಗಳ ಸವಲತ್ತುಗಳಿಗೆ ಕತ್ತರಿ: ಕೇಂದ್ರದ ಚಿಂತನೆ
   
ಹೊಸದಿಲ್ಲಿ,ಸೆ.6: ಕಾಶ್ಮೀರಿ ಪ್ರತ್ಯೇಕವಾದಿಗಳ ವಿದೇಶಿ ಪ್ರವಾಸಗಳು, ಭದ್ರತೆ ಹಾಗೂ ವೈದ್ಯಕೀಯ ಚಿಕಿತ್ಸೆ ಮತ್ತಿತರ ಸವಲತ್ತುಗಳನ್ನು ಮೊಟಕುಗೊಳಿಸುವ ಬಗ್ಗೆ ಸರಕಾರವು ಪರಿಶೀಲಿಸುತ್ತಿದೆಯೆಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ. ಕಣಿವೆ ರಾಜ್ಯದಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವವರನ್ನು ಹತ್ತಿಕ್ಕಲು ದೃಢವಾದ ಕ್ರಮಗಳನ್ನು ಕೈಗೊಳ್ಳಲು ಕೂಡಾ ಕೇಂದ್ರ ಸರಕಾರ ಚಿಂತಿಸುತ್ತಿದೆಯೆಂದು ಮೂಲಗಳು ತಿಳಿಸಿವೆ.
 ಕಾಶ್ಮೀರಕ್ಕೆ ಭೇಟಿ ನೀಡಿದ ಸರ್ವ ಪಕ್ಷ ನಿಯೋಗದ ಸದಸ್ಯರ ಜೊತೆ ಮಾತುಕತೆಗೆ ನಿರಾಕರಿಸಿದ ಪ್ರತ್ಯೇಕವಾದಿಗಳ ನಿರ್ಧಾರದ ಬಗ್ಗೆ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯೋಗದಲ್ಲಿದ್ದ ಐವರು ಸದಸ್ಯರು ಮಾತುಕತೆಗೆ ಯತ್ನಿಸಿದ್ದರು. ಆದರೆ ಪ್ರತ್ಯೇಕವಾದಿಗಳು ಅವರನ್ನು ಭೇಟಿಯಾಗಲೂ ಒಪ್ಪಿರಲಿಲ್ಲ.
 ಈ ಮಧ್ಯೆ ರಾಜ್‌ನಾಥ್ ಸಿಂಗ್ ಹೇಳಿಕೆಯೊಂದನ್ನು ನೀಡಿ, ಕಾಶ್ಮೀರದಲ್ಲಿ ಶಾಂತಿ ಹಾಗೂ ಸಹಜತೆಯನ್ನು ಮರುಸ್ಥಾಪಿಸಲು ಆಸಕ್ತಿಯಿರುವ ಯಾರೊಂದಿಗೂ ಸಹ ಮಾತುಕತೆಗಳನ್ನು ನಡೆಸಲು ‘ಕೇಂದ್ರ ಸರಕಾರದ ಬಾಗಿಲುಗಳು ಸದಾ ತೆರೆದೇ ಇರುತ್ತವೆ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News