ಜಪಾನ್‌ನಿಂದ ಫಿಲಿಪ್ಪೀನ್ಸ್‌ಗೆ ಗಸ್ತು ನೌಕೆ, ಕಣ್ಗಾವಲು ವಿಮಾನ

Update: 2016-09-06 18:11 GMT

ವಿಯಂಟಿಯಾನ್, ಸೆ. 6: ಫಿಲಿಪ್ಪೀನ್ಸ್‌ಗೆ ಎರಡು ಬೃಹತ್ ಗಾತ್ರದ ಗಸ್ತು ನೌಕೆಗಳನ್ನು ನೀಡಲು ಹಾಗೂ ಐದು ಬಳಸಿದ ಕಣ್ಗಾವಲು ವಿಮಾನಗಳನ್ನು ಎರವಲು ಕೊಡಲು ಜಪಾನ್ ಪ್ರಧಾನಿ ಶಿಂರೊ ಅಬೆ ಮಂಗಳವಾರ ಒಪ್ಪಿದ್ದಾರೆ ಎಂದು ಜಪಾನ್ ಸರಕಾರದ ವಕ್ತಾರರೊಬ್ಬರು ತಿಳಿಸಿದರು.

ಈ ಎರಡೂ ದೇಶಗಳು ಚೀನಾದೊಂದಿಗೆ ಜಲಪ್ರದೇಶ ವಿವಾದವನ್ನು ಹೊಂದಿವೆ. ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯುವಲ್ಲಿ ಸಹಕಾರವನ್ನು ಬಲಪಡಿಸಲು ಅಬೆ ಮತ್ತು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟೆ ವಿಯಂಟಿಯಾನ್‌ನಲ್ಲಿ ಒಪ್ಪಿದ್ದಾರೆ ಎಂದು ಜಪಾನ್‌ನ ಉಪ ಸಂಪುಟ ಕಾರ್ಯದರ್ಶಿ ಕೊಯಿಚಿ ಹಗಿಯುಡ ತಿಳಿಸಿದರು. ವಾರ್ಷಿಕ 5 ಲಕ್ಷ ಕೋಟಿ ಡಾಲರ್ ವ್ಯಾಪಾರ ವಹಿವಾಟು ಸಾಗುವ ದಕ್ಷಿಣ ಚೀನಾ ಸಮುದ್ರ ಸಂಪೂರ್ಣ ತನ್ನದೆಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ, ಅದರಲ್ಲಿ ತಮ್ಮ ಪಾಲೂ ಇದೆ ಎಂಬುದಾಗಿ ಬ್ರೂನೈ, ಮಲೇಶ್ಯ, ಫಿಲಿಪ್ಪೀನ್ಸ್, ತೈವಾನ್ ಮತ್ತು ವಿಯೆಟ್ನಾಂಗಳು ಹೇಳುತ್ತಿವೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಫಿಲಿಪ್ಪೀನ್ಸ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ಜುಲೈ ತಿಂಗಳಲ್ಲಿ ತೀರ್ಪು ನೀಡಿರುವುದನ್ನು ಸ್ಮರಿಸಬಹುದಾಗಿದೆ. ಆದರೆ, ಈ ತೀರ್ಪನ್ನು ಅಂಗೀಕರಿಸಲು ಚೀನಾ ನಿರಾಕರಿಸಿದೆ. ಸಣ್ಣ ಗಾತ್ರದ ಗಸ್ತು ನೌಕೆಗಳನ್ನು ಫಿಲಿಪ್ಪೀನ್ಸ್‌ಗೆ ನೀಡಲು ಜಪಾನ್ ಈಗಾಗಲೇ ಒಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News