ಬದಿಯಡ್ಕ: ಸಿಪಿಎಂ-ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ
ಕಾಸರಗೋಡು, ಸೆ.7: ಸಿಪಿಎಂ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು , ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಬದಿಯಡ್ಕ ಪೇಟೆಯಲ್ಲಿ ನಡೆದಿದೆ.
ಘರ್ಷಣೆಯಲ್ಲಿ ಗಾಯಗೊಂಡ ಸಿಪಿಎಂನ ಸ್ಥಳೀಯ ಸಮಿತಿ ಕಾರ್ಯದರ್ಶಿ ಕೆ. ಜಗನ್ನಾಥ ಶೆಟ್ಟಿ, ನಾರಾಯಣ, ಇಸ್ಹಾಕ್ , ಅಬ್ದುಲ್ಲಾ ಮೊದಲಾದವರನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಯುವ ಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ಅವಿನಾಶ್ ರೈ, ಸುಕೇಶ್ ರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಬಾಂಜತ್ತಡ್ಕದಲ್ಲಿ ಸಿಪಿಎಂ ಮುಖಂಡ ಸೀತಾರಾಮ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಈ ಕೃತ್ಯವನ್ನು ಖಂಡಿಸಿ ಸಿಪಿಎಂ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಈ ನಡುವೆ ಗಣೇಶೋತ್ಸವ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆದಿದೆ.
ಸಿಪಿಎಂ ಪ್ರತಿಭಟನೆ ಮತ್ತು ಗಣೇಶೋತ್ಸವ ಮೆರವಣಿಗೆಗೆ ಒಂದೇ ಸಮಯದಲ್ಲಿ ಅನುಮತಿ ನೀಡಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಕಾರ್ಯಕ್ರಮ ಮುಗಿದು ಮನೆಗೆ ತೆರಳುತ್ತಿದ್ದ ಸಿಪಿಎಂ ಮುಖಂಡ ಜಗನ್ನಾಥ ಶೆಟ್ಟಿ ಯವರ ಮೇಲೆ ತಂಡವೊಂದು ಹಲ್ಲೆ ಹಲ್ಲೆ ನಡೆಸಿದೆ .
ಘಟನೆ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.