ಕುಪ್ಪೆಪದವಿನ ಮಹಿಳೆ ತಂಜಾವೂರಿನಲ್ಲಿ ಅಪಘಾತಕ್ಕೆ ಬಲಿ
ಬಂಟ್ವಾಳ, ಸೆ. 7: ತಮಿಳುನಾಡಿನ ತಂಜಾವೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವ ಕಾರೊಂದು ರಸ್ತೆ ಬದಿಯಿದ್ದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂಡುಬಿದಿರೆ ಸಮೀಪದ ಕುಪ್ಪೆಪದವಿನ ಮಹಿಳೆಯೋರ್ವಳು ಮೃತಪಟ್ಟು ಒಂದೇ ಕುಟುಂಬದ 7 ಮಂದಿ ಸಹಿತ 8 ಮಂದಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಮೂಡುಬಿದಿರೆ ಸಮೀಪದ ಕಿಳಿಂಜಾರು ಗ್ರಾಮದ ಕುಪ್ಪೆಪದವು ನಿವಾಸಿ ದಿ. ಖಾದರ್ ಬ್ಯಾರಿ ಎಂಬವರ ಪತ್ನಿ ಉಞಿಮಮ್ಮ (78) ಅಪಘಾತದಿಂದ ಮೃತಪಟ್ಟ ಮಹಿಳೆ.
ಉಞಿಮಮ್ಮರವರ ಮಗಳು ರುಖಿಯಾ(45), ರುಖಿಯಾರವರ ಮಕ್ಕಳಾದ ಝುಲೈಖಾ(25), ಹಾಝರಾ(18), ಖೈರುನ್ನಿಸಾ(15), ರುಖಿಯಾರ ಅಕ್ಕನ ಮಗಳು ಅಸ್ಮಾ(28), ಝುಲೈಖಾ ಅವರ ಮಕ್ಕಳಾದ ಫಾತಿಮಾ ಸನಾ(3), ಮುಹಮ್ಮದ್ ಮುಸ್ತಫಾ(ಒಂದೂವರೆ ವರ್ಷ) ಹಾಗೂ ಬಿ.ಸಿ.ರೋಡ್ ಸಮೀಪದ ಕೈಕಂಬ ಶಾಂತಿಯಂಗಡಿ ನಿವಾಸಿ ಎಸ್.ಹುಸೈನ್ ಎಂಬವರ ಪುತ್ರ ಕಾರು ಚಾಲಕ ಹಬೀಬ್ ರಹ್ಮಾನ್(28) ಅಪಘಾತದಿಂದ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಂಜಾವೂರು ಸರಕಾರಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳುನಾಡಿನ ಮುತ್ತುಪೇಟೆ ದರ್ಗಾ ಸಂದರ್ಶನಕ್ಕೆಂದು ಉಞಿಮಮ್ಮ ಕುಟುಂಬ ಹಬೀಬ್ ರಹ್ಮಾನ್‌ಗೆ ಸೇರಿದ ಬಾಡಿಗೆ ಕಾರಿನಲ್ಲಿ ಸೋಮವಾರ ರಾತ್ರಿ 7 ಗಂಟೆಯ ಸುಮಾರಿಗೆ ಕುಪ್ಪೆಪದವು ಮನೆಯಿಂದ ಹೊರಟ್ಟಿದ್ದರು. ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ತಂಜಾವೂರು ತಲುಪಿದ ಇನ್ನೋವ ಕಾರು ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಯಿದ್ದ ಮರಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ತೀವ್ರ ಸ್ವರೂಪದ ಗಾಯಗೊಂಡ ಉಞಿಮಮ್ಮ ಮೃತಪಟ್ಟಿದ್ದಾರೆ. ಕಾರು ಚಾಲಕ ಹಬೀಬ್ ರಹ್ಮಾನ್ ತೀವ್ರ ಸ್ವರೂಪದ ಗಾಯಗೊಂಡಿದ್ದು, ಉಳಿದವರು ಸಣ್ಣ ಪುಟ್ಟ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.