ಮರ್ಕಂಜ: ಖಾಸಗಿ ಬಸ್ ತಡೆದು ಪ್ರತಿಭಟನೆ
ಸುಳ್ಯ, ಸೆ.7: ಮರ್ಕಂಜಕ್ಕೆ ಹೋಗುವ ಖಾಸಗಿ ಬಸ್ ನಿಯಮಿತ ಸಂಚಾರ ನಡೆಸುತ್ತಿಲ್ಲ, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಊರವರು ಸೇರಿ ಬಸ್‌ಗೆ ತಡೆಒಡ್ಡಿದ ಘಟನೆ ಬಳಿಕ ಮಾತುಕತೆ ನಡೆದ ಘಟನೆ ಬೊಮ್ಮಾರಿನಲ್ಲಿ ನಡೆದಿದೆ.
ಬೆಳಗ್ಗೆ ಸುಳ್ಯದಿಂದ ಮರ್ಕಂಜಕ್ಕೆ ಹೊರಟ ಬಸ್‌ನ್ನು ಬೊಮ್ಮಾರಿನಲ್ಲಿ ಗ್ರಾ.ಪಂ.ಅಧ್ಯಕ್ಷ ಮೋನಪ್ಪ ಪೂಜಾರಿ ಹೈದಂಗೂರು, ಶಶಿಕಾಂತ ಗುಳಿಗಮೂಲೆ, ರಾಮಕೃಷ್ಣ ರಾವ್ ರೆಂಜಾಳ, ಮೋಹನ, ತೇಜಕುಮಾರ, ಗಣೇಶ್ ಭಟ್, ಯತೀಶ ಬೊಮ್ಮಾರು, ಚಂದ್ರಶೇಖರ ಹೈದಂಗೂರು, ಸವಿತಾ ಕಿಲಾರ್ಕಜೆ, ಯಮುನಾ, ರಾಧಾ ಕಿಲಾರ್ಕಜೆ ಮತ್ತಿತರರು ಸೇರಿ ತಡೆದರು.
ಬಸ್ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ತಮಗೆ ಇಷ್ಟ ಬಂದಂತೆ ಸಾರಿಗೆ ಸೌಕರ್ಯವನ್ನು ನಿಲ್ಲಿಸುವುದು, ಪುನಾರಂಭಿಸುವುದು ಹಾಗೂ ಪರ್ಮಿಟ್ ಇಲ್ಲದ ರೂಟ್‌ಗಳಲ್ಲಿ ಸಂಚರಿಸುವುದು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರ ಜತೆ ಮಾತುಕತೆ ನಡೆಸಿ, ಈ ಮೊದಲು ನಿಗದಿಪಡಿಸಿದ ಸಮಯದಂತೆ ಬಸ್ ಸಂಚಾರ ಮಾಡುವಂತೆಯೂ ಸಂಜೆ ಠಾಣೆಯಲ್ಲಿ ಅವಿನಾಶ್ ಬಸ್ ಮಾಲಕ ನಾರಾಯಣ ರೈ, ವ್ಯಾನ್ ಮಾಲಕರಾದ ರಮೇಶ್ ಮರ್ಕಂಜ, ಗಂಗಾಧರ ಬಾಳೆಗುಂಡಿ, ಜಯಪ್ರಕಾಶ್ ಮರ್ಕಂಜ ಮತ್ತು ಗ್ರಾ.ಪಂ. ಅಧ್ಯಕ್ಷ ಮೋನಪ್ಪ ಪೂಜಾರಿ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರು ಮಾತುಕತೆ ನಡೆಸುವುದಾಗಿಯೂ ಹೇಳಿದರು.