ಪಠ್ಯಶಿಕ್ಷಣದಲ್ಲಿ ಕಾನೂನು ಅಭ್ಯಾಸವನ್ನು ಅಳವಡಿಸುವಂತಾಗಲಿ: ಎನ್‌ಕೌಂಟರ್ ಸ್ಪೆಶಲಿಸ್ಟ್ ದಯಾನಾಯಕ್
ಮೂಡುಬಿದಿರೆ, ಸೆ.7: ಅತಿ ಹೆಚ್ಚಿನ ಶ್ರಮವಹಿಸಿ ಮುತುವರ್ಜಿಯಿಂದ ಕೆಲಸ ಮಾಡುವ ಏಕೈಕ ಇಲಾಖೆಯೆಂದರೆ ಅದು ಭಾರತೀಯ ಪೊಲೀಸ್ ಇಲಾಖೆ. ಆದರೆ ನಮ್ಮ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇರುವ ಹಲವಾರು ಕಾನೂನುಗಳು ಬ್ರಿಟಿಷರ ಕಾಲದ್ದಾಗಿವೆ. ಈ ಕಾನೂನುಗಳಿಗೆ ತಕ್ಕ ತಿದ್ದುಪಡಿಯನ್ನು ಮಾಡುವ ಅವಶ್ಯಕತೆ ಇದೆ’ ಎಂದು ಎನ್‌ಕೌಂಟರ್ ಸ್ಪೆಶಲಿಸ್ಟ್ ಪಿಎಸ್ಸೈ ದಯಾನಾಯಕ್ ಹೇಳಿದರು.
ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ 2016-17 ನೆ ಸಾಲಿನ ‘ರೋಸ್ಟ್ರವ್’-ಸ್ಪೀಕರ್ಸ್ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು. ಅಪರಾಧ, ಯುವಜನತೆ ಹಾಗೂ ಸಮಾಜ ಎಂಬ ವಿಷಯದ ಕುರಿತಾಗಿ ಮಾತನಾಡಿದ ದಯಾನಾಯಕ್ ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಇಂದಿನ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರಿಯುವುದು ಅತಿ ಅವಶ್ಯ. ಕಾನೂನುಗಳನ್ನು ಅರಿತು ಅದರಂತೆ ನಡೆದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಜನತೆ ಕಾನೂನನ್ನು ಅರಿಯುವುದರಿಂದ ಪೊಲೀಸ್ ಇಲಾಖೆಗೂ ಕೂಡ ತುಂಬಾ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯಶಿಕ್ಷಣದಲ್ಲಿ ಕಾನೂನು ಅಭ್ಯಾಸವನ್ನು ಅಳವಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕೆಲಸ ಮಾಡುವಾಗ ತುಂಬಾ ಜಾಗ್ರತೆ ವಹಿಸಬೇಕು. ಅಜಾಗರೂಕತೆಯಿಂದಾಗುವ ಚಿಕ್ಕ ಪ್ರಮಾದ ಕೂಡ ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ನಮ್ಮ ಕಾರ್ಯಕ್ಷೇತ್ರದ ಕುರಿತು ಆಳವಾದ ಜ್ಞಾನ, ಅರಿವು ಇದ್ದಾಗ ಇಂತಹ ಪ್ರಮಾದಗಳುಂಟಾಗುವುದನ್ನು ತಪ್ಪಿಸಬಹುದು. ನಾವು ಏನು ಕೆಲಸ ಮಾಡುತ್ತದ್ದೇವೆಂಬುದರ ಸ್ಪಷ್ಟ ಅರಿವು ನಮಗಿರಬೇಕು ಎಂದರು.
ಒಂದೇ ರೀತಿಯ ಶಿಕ್ಷಣವನ್ನು ಪಡೆದರೂ ವಿದ್ಯಾರ್ಥಿಗಳಲ್ಲಿ ಹಲವಾರು ವ್ಯತ್ಯಾಸಗಳಿರುತ್ತವೆ. ಕೆಲವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಕೆಲವರು ತಪ್ಪುಗಳನ್ನೆಸಗುತ್ತಾ ಸಮಾಜಘಾತುಕರಾಗಿ ಬದಲಾಗುತ್ತಾರೆ. ಅವರು ಕೆಲಸ ಮಾಡುವ ರೀತಿ, ಯೋಚನಾ ವಿಧಾನ ಕೂಡ ಇಲ್ಲಿ ಮುಖ್ಯವಾಗುತ್ತದೆ. ಮಾಡುವ ಕೆಲಸ ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ. ಯಾವುದೇ ಕೆಲಸ ಮಾಡಲು ಸಾಮರ್ಥ್ಯ ಇರಲೇಬೇಕು. ಆದರೆ ಇರುವ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಎಲ್ಲಾ ಕ್ಷೇತ್ರಗಳಲ್ಲಿ ಪರಿಣತಿ ಪಡೆಯುವುದು ಸಾಧ್ಯವಿಲ್ಲ. ಯಾವುದಾದರೂ ಒಂದು ಕ್ಷೇತ್ರದಲ್ಲಿ ನೈಪುಣ್ಯತೆ ಪಡೆದು ಅದರಲ್ಲಿ ಅತ್ಯುತ್ತಮವಾದುದನ್ನು ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್, ರೋಸ್ಟ್ರವ್ ಕ್ಲಬ್‌ನ ಅಧ್ಯಕ್ಷೆ ರಕ್ಷಾ ಸತೀಶ್, ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.