ಕೌಶಲ್ಯದಿಂದ ಅಭಿವೃದ್ಧಿ ಸಾಧ್ಯ: ಡಾ.ಜಿ.ಆರ್ ಕೃಷ್ಣಮೂರ್ತಿ

Update: 2016-09-07 13:02 GMT

ಮೂಡುಬಿದಿರೆ, ಸೆ.7: ಕೌಶಲ್ಯದಿಂದ ನಮ್ಮ ವ್ಯಕ್ತಿತ್ವ, ಔದ್ಯೋಗಿಕ ಸಾಮರ್ಥ್ಯ ಬಲಿಷ್ಠಗೊಳ್ಳುತ್ತದೆ. ಯಾವುದೇ ಸಂದರ್ಭದಲ್ಲಿ ತಾನು ಕೆಲಸ ಮಾಡುವ ಕ್ಷೇತ್ರ, ತನ್ನ ಕುಟುಂಬ ಹಾಗೂ ಸಮಾಜವನ್ನು ಸಮರ್ಥವಾಗಿ ನಿಭಾಯಿಸಲು ಗುಣ ಪ್ರತಿಯೊಬ್ಬರಲ್ಲಿ ಬರಬೇಕು. ಎಂಬಿಎ ವಿದ್ಯಾರ್ಥಿಗಳು ಪಠ್ಯದಲ್ಲಿ ಉತ್ತಮವಾಗಿದ್ದರೆ ಸಾಲದು, ಅದರ ಜೊತೆ ಕೌಶಲ್ಯವನ್ನೂ ಹೊಂದಿರಬೇಕು. ಕೌಶಲ್ಯತೆಯಿಂದ ವೈಯಕ್ತಿಕ ಹಾಗೂ ಸಮಾಜ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಂಗಳೂರು ಎ.ಜೆ. ಶೆಟ್ಟಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ, ಸಲಹೆಗಾರ ಡಾ.ಜಿ.ಆರ್. ಕೃಷ್ಣಮೂರ್ತಿ ಹೇಳಿದರು.

ಅವರು ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ 2016-18ನೆ ಸಾಲಿನ ಎಂಬಿಎ ವಿಭಾಗದ ಪ್ರಾರಂಭೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎಂಬಿಎ ಶಿಕ್ಷಣದೊಂದಿಗೆ ಕೌಶಲ್ಯ ಅಬಿವೃದ್ಧಿಯತ್ತಲೂ ವಿದ್ಯಾರ್ಥಿಗಳು ಗಮನಹರಿಸಬೇಕು. ಕೌಶಲ್ಯವನ್ನು ಸರಿಯಾದ ಸಂದರ್ಭದಲ್ಲಿ ಬಳಸುವ, ವಿವಿಧ ವ್ಯಕ್ತಿತ್ವದವರೊಡನೆ ಸರಿಯಾದ ಸಂವಹನ, ಜವಾಬ್ದಾರಿಯನ್ನು ಅರಿತು ಮುನ್ನಡೆಯುವ ಗುಣದಿಂದ ಎಂಬಿಎ ವಿದ್ಯಾರ್ಥಿಗಳು ಉದ್ಯೋಗ ಮಾತ್ರವಲ್ಲ, ಜೀವನದಲ್ಲೂ ಮುನ್ನಡೆಯನ್ನು ಸಾಧಿಸಬಹುದು. ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ಮಾಡುವಂತಹ ಉತ್ತಮ ಅವಕಾಶಗಳಿವೆ. ಈ ಕಾರಣದಿಂದಲೇ ದೇಶದಲ್ಲಿರುವ ಪ್ರಮುಖ 200 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಆಳ್ವಾಸ್ ಒಂದಾಗಿದೆ. ಪರಿಶ್ರಮ, ಸೃಜನಶೀಲತೆಯ ಮಿಳಿತದಿಂದ ಸಂಸ್ಥೆ ಮುನ್ನಡೆ ಸಾಧಿಸಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ಲೇಸ್‌ಮೆಂಟ್ ಪ್ರತಿಷ್ಠೆಯಿಂದ ಸಂಸ್ಥೆ ಬೆಳೆಯುವುದಿಲ್ಲ, ವಿದ್ಯಾರ್ಥಿಗಳ ಸಾಧನೆಯೇ ಸಂಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಪ್ರೇರಣೆಯಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ವ್ಯಾಪ್ತಿಗೆ ಬರುವ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದೆ. ತಮ್ಮ ಆಯ್ಕೆಗಳಲ್ಲಿ ಜಾಣ್ಮೆ, ಜವಾಬ್ದಾರಿಯಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರೈಸುವುದರಿಂದ ಉತ್ತಮ ಅವಕಾಶಗಳ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪಾಸ್ಟ್ ಕನ್ವೆರ್ಷನ್ ಮಾರ್ಕೆಟಿಂಗ್ ಸೊಲ್ಯುಷನ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಯೂನಿಸ್ ಅಹ್ಮದ್ ಲೋನ್ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು.

ಎಂಬಿಎ ವಿಭಾಗದ ಡೀನ್ ಪ್ರೊ.ಪಿ ರಾಮಕೃಷ್ಣ ಚಾಡಗ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರೊ.ಗುರುದತ್ತ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News