ಕೇಂದ್ರದ ಪ್ರಮುಖ ನಾಲ್ವರು ಸಚಿವರಿಂದ ಕಚೇರಿ ನವೀಕರಣಕ್ಕೆ ಮಾಡಿದ ಖರ್ಚು ಎಷ್ಟು ಗೊತ್ತೇ?
ಹೊಸದಿಲ್ಲಿ, ಸೆ.7: ಪ್ರಧಾನಿ ನರೇಂದ್ರ ಮೋದಿ ಸಂಪುಟದ ನಾಲ್ವರು ಪ್ರಮುಖ ಸಚಿವರಾಗಿರುವ, ವಿತ್ತ ಸಚಿವ ಅರುಣ್ ಜೇಟ್ಲಿ, ಗೃಹ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ತಮ್ಮ ಕಚೇರಿಗಳ ನವೀಕರಣಕ್ಕಾಗಿ ನಯಾ ಪೈಸೆ ಖರ್ಚನ್ನೂ ಮಾಡಿಲ್ಲ.
ಇತ್ತೀಚಿನ ಸಂಪುಟ ಪುನಾರಚನೆಯಿಂದ ಬಾಧಿತರಾದವರೂ ಸೇರಿದಂತೆ ಸಹಾಯಕ ಹಾಗೂ ಸ್ವಲ್ಪ ಕಡಿಮೆ ವಜನಿನ ಸಚಿವರು ತಮ್ಮ ಕೆಲಸದ ಸ್ಥಳಗಳನ್ನು ಸುಂದರಗೊಳಿಸುವ ಉತ್ಸಾಹ ತೋರಿಸಿದ್ದರು. ಆರ್‌ಟಿಐ ಅರ್ಜಿಯೊಂದಕ್ಕೆ ಬಂದ ಉತ್ತರಗಳಲ್ಲಿ, ಪ್ರೀಮಿಯಂ ವಾಶ್ ಬೆಸಿನ್‌ಗಳಿಂದ ಚಿತ್ರಗಳುಳ್ಳ ಗಾಜಿನ ಗೋಡೆಗಳು ಹಾಗೂ ಮರದ ನೆಲಹಾಸುಗಳ ವರೆಗಿನ ಕಚೇರಿ ಅಲಂಕಾರದ ಖರ್ಚಿನ ಮಾಹಿತಿ ಬಹಿರಂಗಗೊಂಡಿದೆ.
ಎನ್‌ಡಿಎ ಸರಕಾರದ ಮೊದಲೆರಡು ವರ್ಷಗಳಲ್ಲಿ 23 ಸಚಿವರು ಕಚೇರಿಗಳ ನವೀಕರಣಕ್ಕಾಗಿ ಒಟ್ಟು 3.5 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಇತರ ಸಚಿವರ ಕುರಿತಾದ ಖರ್ಚಿನ ವಿವರವನ್ನು ಕಾಯಲಾಗುತ್ತಿದೆ.
ಈ 23 ಸಚಿವರಲ್ಲಿ, ಸ್ಮೃತಿ ಇರಾನಿ, ಚೌಧರಿ ಬೀರೇಂದ್ರ ಸಿಂಗ್, ರಾಜ್ಯವರ್ಧನ ರಾಥೋಡ್, ಉಪೇಂದ್ರ ಕುಶ್ವಾಹ, ಆರ್.ಎಸ್.ಕಥೇರಿಯ, ಜೆ.ಪಿ.ನಡ್ವಾ, ಸನ್ವರ್ ಜಾಟ್ ಹಾಗೂ ಜಿತೇಂದ್ರ ಸಿಂಗ್ ಹೆಚ್ಚು ಖರ್ಚು ಮಾಡಿದವರಾಗಿದ್ದಾರೆ.
ಸ್ಮೃತಿ ಇರಾನಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆಯಾಗಿದ್ದಾಗ ಅವರ ಕಚೇರಿ ನವೀಕರಣಕ್ಕೆ ರೂ. 70 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಹಾಗೂ ತನ್ನಿಬ್ಬರು ಸಹಾಯಕ ಸಚಿವರ ಕಚೇರಿಗಳ ನವೀಕರಣಕ್ಕೆ ರೂ. 40 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಹೀಗೆ ಒಟ್ಟು ರೂ. 1.16 ಕೋಟಿ ಖರ್ಚು ಮಾಡಿದ್ದರು. ಸಹಾಯಕ ಸಚಿವರಿಗೆ ಹೊಸ ಕಚೇರಿಗಳ ಅಗತ್ಯವೇನು ಎಂಬ ಪ್ರಶ್ನೆಗೆ ಸಚಿವಾಲಯ ಉತ್ತರಿಸಿಲ್ಲ.
ಅಲ್ಪಸಂಖ್ಯಾತರ ವ್ಯವಹಾರಗಳ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಕಚೇರಿ ನವೀಕರಣಕ್ಕೆ ಖರ್ಚನ್ನೇ ಮಾಡದಿದ್ದರೂ, ಅವರ ಆಗಿನ ಸಹಾಯಕ ಸಚಿವ ಎಂ.ಎ.ನಕ್ವಿ, ರೂ. 14 ಲಕ್ಷದಷ್ಟು ಖರ್ಚು ಮಾಡಿದ್ದರು. ಅದರಲ್ಲಿ ರೂ.7 ಸಾವಿರ ವೌಲ್ಯದ ಕಸದ ಬುಟ್ಟಿಗಳೂ ಸೇರಿದ್ದವು.
ಮಾರ್ಗಸೂಚಿಯಂತೆ ಸಚಿವರ ನಿವಾಸದಲ್ಲಿರುವ ಕಚೇರಿಗೆ ಪೀಠೋಪಕರಣ ಹಾಗೂ ಇತರ ಸಾಮಗ್ರಿಗಳಿಗಾಗಿ ರೂ. 2 ಲಕ್ಷ ಹಾಗೂ ವಿದ್ಯುದುಪಕರಣಗಳಿಗಾಗಿ ರೂ. 1 ಲಕ್ಷ ಖರ್ಚು ಮಾಡಬಹುದು. ಸೆಕ್ರೆಟರಿಯೆಟ್‌ನಲ್ಲಿರುವ ಕಚೇರಿಗಳಲ್ಲಿ ಈ ಖರ್ಚು ಕ್ರಮವಾಗಿ ರೂ. 6.5 ಲಕ್ಷ ಹಾಗೂ ರೂ. 1.5 ಲಕ್ಷವಾಗಿರುತ್ತದೆ. ಆದರೆ, ಹೊಸ ಕಚೇರಿ ನಿರ್ಮಾಣಕ್ಕಾದರೆ ವೆಚ್ಚಕ್ಕೆ ಮಿತಿಯಿರುವುದಿಲ್ಲ.