ಉಪ್ಪಿನಂಗಡಿ: ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿಯಾದ ಗಣೇಶೋತ್ಸವ

Update: 2016-09-07 15:41 GMT

ಉಪ್ಪಿನಂಗಡಿ, ಸೆ.7: ಮತೀಯ ಸೌಹಾರ್ದ ಮೂಡಿಸುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ನೀಡಿದ ಆಮಂತ್ರಣವನ್ನು ಮನ್ನಿಸಿ ಉಪ್ಪಿನಂಗಡಿಯ ದೀನರ ಕನ್ಯಾಮಾತೆ ದೇಗುಲದ ಧರ್ಮ ಗುರು ರೆ.ಫಾ.ರೊನಾಲ್ಡ್ ಪಿಂಟೊ ಮತ್ತು ಚರ್ಚ್‌ನ ಆಡಳಿತ ಮಂಡಳಿಯ ಸದಸ್ಯರು ಗಣೇಶೋತ್ಸವಕ್ಕೆ ಆಗಮಿಸಿ ಶ್ರೀ ದೇವರಿಗೆ ಫಲ ಪುಷ್ಪವನ್ನರ್ಪಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೋನಾಲ್ಡ್ ಪಿಂಟೊ, ದೇಗುಲಕ್ಕೆ ಭೇಟಿ ನೀಡಬೇಕೆಂಬ ನನ್ನ ಬಯಕೆ ಸಮಿತಿ ಸದಸ್ಯರ ಗೌರವಪೂರ್ಣ ಆಮಂತ್ರಣದಿಂದ ಫಲಿಸಿದೆ. ಇಲ್ಲಿನ ಪ್ರೀತಿಭರಿತ ಸ್ವಾಗತ ಸಂತಸ ತಂದಿದೆ. ಪ್ರತಿ ಸಮುದಾಯದ ಹಬ್ಬಗಳನ್ನು ಎಲ್ಲರೂ ಕೂಡಿ ಆಚರಿಸುವ ಕಾಲ ಕೂಡಿ ಬರಲಿ ಎಂದು ಹಾರೈಸಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಧ್ಯಕ್ಷ ಎನ್. ಗೋಪಾಲ ಹೆಗ್ಡೆ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿ ಗೌರವಿಸಿದರು.

ಕ್ರೈಸ್ತ ಧರ್ಮಗುರುಗಳೊಂದಿಗೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರಾಬರ್ಟ್ ಡಿಸೋಜ, ಸದಸ್ಯ ಡಾ.ಸುಪ್ರಿತ್ ಲೋಬೊ, ಡಾ. ಶೈನಿ ಲೋಬೊ, ಮ್ಯಾಕ್ಸಿಂ ಡಿಕೋಸ್ತ, ಪ್ರಶಾಂತ್ ಡಿಕೋಸ್ತ, ವಿನ್ಸೆಂಟ್ ವೇಗಸ್, ನವೀನ್ ಬ್ರಾಗ್ಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News