ಆರ್ಥಿಕ ಬಡತನ ದೂರಮಾಡಲು ಹೃದಯ ಶ್ರೀಮಂತಿಕೆ ಬೇಕು: ಡಾ. ಡಿ.ವೀರೇಂದ್ರ ಹೆಗ್ಗಡೆ

Update: 2016-09-07 15:48 GMT

ಕಡಬ, ಸೆ.7: ಆರ್ಥಿಕ ಬಡತನ ದೂರಮಾಡಲು ಹೃದಯ ಶ್ರೀಮಂತಿಕೆ ಬೇಕು. ಉತ್ತಮ ಭವಿಷ್ಯಕ್ಕೆ ಪರಿವರ್ತನೆಯ ಕಲ್ಪನೆ ಮೈಗೂಡಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಬುಧವಾರ ಕಡಬ ಸಮೀಪದ ರೆಂಜಿಲಾಡಿ ಗ್ರಾಮದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕಾರ್ಯಚಟುವಟಿಕೆಗಳ ವೀಕ್ಷಣೆ-ಕೃಷಿ ಕ್ಷೇತ್ರ ಸಂದರ್ಶನ ನಡೆಸಿ ಡೀಕಯ್ಯ ಗೌಡ ಪಾಲೆತ್ತಾಡಿಯವರ ಮನೆಯಲ್ಲಿ ನಡೆದ ಪ್ರಗತಿ ಬಂಧು ಸ್ವಸಂಘ ಸದಸ್ಯರ ಪ್ರಗತಿ ಅವಲೋಕನ ಸಭೆಯಲ್ಲಿ ಮಾತನಾಡಿದರು.

ಹೊಸಬದುಕು ರೂಪಿಸಲು ಬದಲಾವಣೆಯ ಕಲ್ಪನೆ ಮೂಡಬೇಕು. ಮನುಷ್ಯನಿಗೆ ಆರ್ಥಿಕ ಬಡತನ ಇದ್ದರೂ ಹೃದಯದಲ್ಲಿ ಬಡತನ ಇರಬಾರದು, ಹೃದಯ ಬಡತನ ಇದ್ದರೆ ಯಾವ ಅಭಿವೃದ್ದಿಯೂ ಸಾಧಿಸಲಾಗುವುದಿಲ್ಲ, ಸ್ವಸಹಾಯ ಸಂಘಗಳ ಮೂಲಕ ಸ್ವಅಭಿವೃದ್ದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೈವ ದೇವರುಗಳ ನಂಬಿಕೆಯೊಂದಿಗೆ ಪರರ ಕಾಳಜಿ ಮೈಗೂಡಿಸಿಕೊಂಡು ಮುನ್ನಡೆದಾಗ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಜಾತಿ ಧರ್ಮದ ಆಧಾರದಲ್ಲಿ ಅಂತರವಿದ್ದ ಸಂದರ್ಭ ಯೋಜನೆ ಪ್ರಾರಂಭಿಸಿದಾಗ ಹಲವು ತೊಡಕುಗಳು ಅನುವಿಸಬೇಕಾಯಿತು. ಬಳಿಕ ಮನಪರಿವರ್ತನೆ ಮೂಲಕ ಏಕತಾಭಾವನೆ ಮೂಡಿಸಲು ಯೋಜನೆ ಯಶಸ್ವಿಯಾಯಿತು. ಜನರು ನೆರೆಕರೆಯವರೊಂದಿಗಿನ ಬಾಂಧವ್ಯ, ಜಾತಿ ಮತ ಭೇದ ಮರೆತು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವ್ಯವಹಾರಿಕ ಜೀವನ ನಡೆಸುವಂತಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗಿಸ್ ಮಾತನಾಡಿ, ಯೋಜನೆ ಪ್ರಾರಂಭವಾದಾಗಿನಿಂದ ಸಮಾಜದಲ್ಲಿ ಪರಿವರ್ತನೆಯಾಗಿದೆ. ಯೋಜನೆಯ ಪ್ರತಿಯೊಬ್ಬ ಸದಸ್ಯರನ್ನು ಕೃಷಿ, ಅರ್ಥಿಕವಾಗಿ ಅಭಿವೃದ್ದಿಪಡಿಸುವುದರೊಂದಿಗೆ ಸದೃಢ ಸಮಾಜ ನಿಮಾಣಕ್ಕೆ ಯೋಜನೆಯ ಕಾರ್ಯ ಕಾರಣವಾಗಿದೆ ಎಂದರು.

ಯೋಜನೆಯ ಕೊಣಾಜೆ ಒಕ್ಕೂಟ ಅಧ್ಯಕ್ಷ ದಯಾನಂದ ಪೂಜಾರಿ ಪ್ರಗತಿಬಂಧು ಸಂಘದಲ್ಲಿ ಪಾಲ್ಗೊಂಡ ಬಳಿಕ ತಮ್ಮ ಕುಟುಂಬದಲ್ಲಿನ ಏಳಿಗೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಗ್ರಾಮದ ಬಾಗಿ ಎಂಬುವವರಿಗೆ ಮನೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಕೊಡಮಾಡಿದ ಒಂದು ಲಕ್ಷದ ಸಹಾಯಧನ ಚೆಕ್ಕನ್ನು ಫಲಾನುಭವಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ವಿತರಿಸಿದರು.

ಎಪಿಎಂಸಿ ಸದಸ್ಯ ಸೀತರಾಮ ಗೌಡ ಪೊಸವಳಿಕೆ, ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಮರ್ಧಾಳ ಬೀಡಿನ ಸನತ್ ಕುಮಾರ್ ಜೈನ್, ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಧರ್ನಪ್ಪ ಮೂಲ್ಯ, ತಾಲೂಕು ಕೃಷಿ ಅಧಿಕಾರಿ ಹರೀಶ್, ಕಡಬ ವಲಯ ಮೇಲ್ವಿಚಾರಕ ರಾಜು ಗೌಡ ಉಪಸ್ಥಿತರಿದ್ದರು.

ಭವಾನಿಶಂಕರ ಸ್ವಾಗತಿಸಿದರು. ಯೋಜನೆಯ ನೂಜಿಬಾಳ್ತಿಲ ಗ್ರಾಮದ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ವಂದಿಸಿದರು. ರಜಿತಾ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News