×
Ad

ಹನ್ನೊಂದು ವರ್ಷಗಳಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂ ನ್ಯಾಯಮೂರ್ತಿಯಿಲ್ಲ

Update: 2016-09-07 23:43 IST

ಹೊಸದಿಲ್ಲಿ, ಸೆ.7: ಎಲ್ಲ ವಲಯಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಿರುವುದು ತಿಳಿದ ವಿಚಾರವೇ ಆಗಿದೆ. ಆದರೆ, ನ್ಯಾಯಾಂಗದ ವಿಚಾರಕ್ಕೆ ಬಂದಾಗ ಇದು ತೀರಾ ಕಳವಳದ ವಿಚಾರವಾಗಿದೆ. ದೇಶದ ಸುಪ್ರೀಂ ಕೋರ್ಟ್‌ನಲ್ಲಿ ಹಾಲಿ, ಮುಸ್ಲಿಂ ಸಮುದಾಯದ ಒಬ್ಬರೇ ಒಬ್ಬರು ನ್ಯಾಯಮೂರ್ತಿ ಇಲ್ಲವೆಂದು ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಪ್ರಕಟವಾಗಿರುವ ವರದಿಯೊಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂ ನ್ಯಾಯ ಮೂರ್ತಿಯೊಬ್ಬರು ಇಲ್ಲದಿರುವುದು 11 ವರ್ಷಗಳಲ್ಲಿ ಇದು ಪ್ರಥಮ ಹಾಗೂ ಸುಮಾರು 3 ದಶಕಗಳಲ್ಲಿ ಇದು ಎರಡನೆಯ ಬಾರಿಯಾಗಿದೆ.

2012ರ ಎಪ್ರಿಲ್ ಹಾಗೂ ಡಿಸೆಂಬರ್‌ಗಳಲ್ಲಿ ಕ್ರಮವಾಗಿ ಭಡ್ತಿ ಪಡೆದಿದ್ದ ನ್ಯಾ.ಫಕೀರ್ ಮುಹಮ್ಮದ್ ಇಬ್ರಾಹಿಂ ಖಲೀಫುಲ್ಲಾ ಹಾಗೂ ನ್ಯಾ.ಎಂ.ವೈ.ಇಕ್ಬಾಲ್ 2012ರಲ್ಲಿ ನೇಮಕಗೊಂಡಿದ್ದ ಕೊನೆಯ ಮುಸ್ಲಿಂ ನ್ಯಾಯಮೂರ್ತಿಗಳಾಗಿದ್ದರು. ಅವರೀಗ ನಿವೃತ್ತರಾಗಿದ್ದಾರೆ. ಹೈಕೋರ್ಟ್‌ಗಳಲ್ಲಿ ಕೇವಲ ಇಬ್ಬರು ಮುಸ್ಲಿಮರು ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ. ಅಸ್ಸಾಂ ನಿವಾಸಿ ನ್ಯಾ.ಇಕ್ಬಾಲ್ ಅಹ್ಮದ್ ಅನ್ಸಾರಿ ಬಿಹಾರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಮುಂದಿನ ಅಕ್ಟೋಬರ್‌ಗೆ ನಿವೃತ್ತರಾಗಲಿದ್ದಾರೆ. ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಮ್ಮು-ಕಾಶ್ಮೀರದ ನಿವಾಸಿ ಮನ್ಸೂರ್ ಅಹ್ಮದ್ ಮಿರ್, 2017ರ ಎಪ್ರಿಲ್‌ನಲ್ಲಿ ನಿವೃತ್ತಿ ಪಡೆಯಲಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗರಿಷ್ಠ ಬಲ 31 ಹಾಗೂ ಹಾಲಿ 28 ಮಂದಿ ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿಗಳಾದ ಎ.ಗೋಪಾಲ ಗೌಡ ಹಾಗೂ ಬೊಕ್ಕಲಿಂಗಂ ನಾಗಪ್ಪನ್ ಅಕ್ಟೋಬರ್‌ನಲ್ಲಿ ಹಾಗೂ ನ್ಯಾಯ ಮೂರ್ತಿಗಳಾದ ಶಿವಕೀರ್ತಿ ಸಿಂಗ್ ಹಾಗೂ ಅನಿಲ್.ಆರ್.ದವೆ ನವೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವಿಲ್ಲದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ಅದು ಶೀಘ್ರವೇ ಮುಸ್ಲಿಂ ನ್ಯಾಯಮೂರ್ತಿಯೊಬ್ಬರನ್ನು ಪಡೆಯಲೆಂದು ಆಶಿಸುತ್ತೇನೆ. ಇದು ಅವರ ಹಕ್ಕು ನಿರಾಕರಿಸಲ್ಪಡುವ ಪ್ರಶ್ನೆಯಲ್ಲ. ಇದು ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲ ಜಾತಿ, ಮತ, ಪ್ರದೇಶಗಳಿಗೆ ಸೂಕ್ತ ಪ್ರಾತಿನಿಧ್ಯದ ಪ್ರಶ್ನೆಯಾಗಿದೆ. ವಿದೇಶಗಳಲ್ಲಿ ಈ ರೀತಿ ಪ್ರಾತಿನಿಧ್ಯ ನೀಡಲು ವಿಶೇಷ ಪ್ರಸ್ತಾಪಗಳಿವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News