ಆಧ್ಯಾತ್ಮಿಕತೆ ಪಡೆಯಲು ಮೋದಿಗೆ ವಿನೂತನ ಸಲಹೆ ನೀಡಿದ ಜಿಗ್ನೇಶ್ ಮೇವಾನಿ
ಗುಜರಾತ್, ಸೆ.8: ಡೆಮಾಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾಗೆ ತಾವು ನೀಡಿದ 25 ನಿಮಿಷ ಅವಧಿಯ ಸಂದರ್ಶನದಲ್ಲಿ ಗುಜರಾತ್ ದಲಿತ ಆಂದೋಲನದ ಮೊಗವೆಂದೇ ಪರಿಗಣಿಸಲಾಗಿರುವ ಜಿಗ್ನೇಶ್ ಮೇವಾನಿ, ತಾನು ಈ ಆಂದೋಲನದಲ್ಲಿ ಭಾಗಿಯಾದ ಬಗ್ಗೆ, ಗುಜರಾತ್ ಮಾದರಿಯ ವೈಫಲ್ಯದ ಬಗ್ಗೆ ಹಾಗೂ ಬಿಜೆಪಿ ನೇತೃತ್ವದ ಸರಕಾರದ ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದ್ದಾರೆ.
ದನಗಳ ಕಳೇಬರಗಳನ್ನು ವಿಲೇವಾರಿ ಮಾಡಲು ನಿರಾಕರಿಸುವ ಏಕೈಕ ಧ್ಯೇಯದೊಂದಿಗೆ ದಲಿತ ಆಂದೋಲನವನ್ನು ಮುಂದುವರಿಸಿಕೊಂಡು ಹೋಗ ಬಯಸಿರುವ ಮೇವಾನಿಯ ಪ್ರಕಾರ ಗುಜರಾತ್ ಮಾದರಿ ‘ಸಂಪೂರ್ಣ ವಿಫಲ’ವಾಗಿದೆ.
‘‘ಗುಜರಾತ್ ನ ಪ್ರತಿಭಟನೆಯ ಇತಿಹಾಸದಲ್ಲಿ ಅಲ್ಲಿನ ಪ್ರಬಲ ಸಮುದಾಯವಾದ ಪಟಿದಾರ್ ಹಾಗೂ ದುರ್ಬಲ ವರ್ಗದ ದಲಿತರು ತಮ್ಮ ವಿರೋಧವನ್ನು ತೋರ್ಪಡಿಸಲು ಆತ್ಮಹತ್ಯೆಯ ಹಂತಕ್ಕೆ ಬರುವ ಪ್ರಮೇಯವೇ ಇರಲಿಲ್ಲ’ ಎಂದು ಅವರು ಹೇಳುತ್ತಾರೆ. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಡೆಯುವ ದೊಡ್ಡ ಸಂಖ್ಯೆಯ ರೈತರು ಹಾಗೂ ಕಾರ್ಮಿಕರಿದ್ದಾರೆಂದು ಹೇಳುವ ಅವರು ರಾಜ್ಯದ ಏಕೈಕ ಕುಷ್ಠ ರೋಗಿಗಳ ಆಸ್ಪತ್ರೆಯ ಮುಚ್ಚುಗಡೆ ಹಾಗೂ ರೈತರ ಆತ್ಮಹತ್ಯೆಗಳನ್ನು ತಡೆಯಲು ಸರಕಾರದ ವೈಫಲ್ಯದತ್ತ ಬೊಟ್ಟು ಮಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು 2000ರಲ್ಲಿ ಕರ್ಮಯೋಗಿ ಎಂಬ ಕೃತಿ ರಚಿಸಿದ್ದರು ಎಂದು ಅವರು ಹೇಳುತ್ತಾರೆ. ಸಫಾಯಿ ಕರ್ಮಚಾರಿಗಳು ತಮ್ಮ ಕೆಲಸದಿಂದ ಆಧ್ಯಾತ್ಮಿಕ ತೃಪ್ತಿ ಪಡೆಯುತ್ತಾರೆಂದು ಈ ಪುಸ್ತಕದಲ್ಲಿ ಮೋದಿ ಘೋಷಿಸಿಕೊಂಡಿದ್ದಾರೆಂದು ಮೇವಾನಿ ಹೇಳುತ್ತಾರೆ. ಮೇವಾನಿಯ ಪ್ರತಿಕ್ರಿಯೆ ಹೀಗಿದೆ: ‘‘ಸತ್ತ ದನಗಳ ದೇಹಗಳನ್ನು ವಿಲೇವಾರಿ ಮಾಡುವ ಕಾಯಕವನ್ನು ನಾವು ತೊರೆದಿದ್ದೇವೆ. ಈಗ ನೀವು ಈ ಕೆಲಸ ಮಾಡಿ ಸ್ವಲ್ಪ ಆಧ್ಯಾತ್ಮಿಕತೆ ಅನುಭವಿಸಿ.’’