×
Ad

ಉಡುಪಿ ಜಿಲ್ಲಾದ್ಯಂತ ಸಡಗರದ ಕನ್ಯಾ ಮರಿಯಮ್ಮರ ಜನ್ಮ ದಿನಾಚರಣೆ ‘ಮೋಂತಿ ಫೆಸ್ಟ್’

Update: 2016-09-08 15:47 IST

ಉಡುಪಿ, ಸೆ.8: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೋಂತಿ ಫೆಸ್ಟ್ ಅಥವಾ ತೆನೆ ಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಭಕ್ತಿಭಾವದಿಂದ ಗುರುವಾರ ಆಚರಿಸಿದರು.
ಬೆಳ್ಳಂಬೆಳಗ್ಗೆ ಎದ್ದು ಚರ್ಚುಗಳಿಗೆ ತೆರಳಿದ ಪುಟ್ಟ ಮಕ್ಕಳು ಕನ್ಯಾಮರಿಯಮ್ಮನವರ ಮೂರ್ತಿಗೆ ಹೂಗಳನ್ನ ಸಮರ್ಪಿಸಿ ಬಳಿಕ ಚರ್ಚಿನ ಧರ್ಮಗುರು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶೀರ್ವದಿಸಿ ರಾಜ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗಳು ಕುಟುಂಬ ಜೀವನ, ಹೆಣ್ಣು ಮಗುವಿನ ರಕ್ಷಣೆ ಹಾಗೂ ಪ್ರಕೃತಿಯ ಮೇಲಿನ ಅಸಮತೋಲನ ಕುರಿತು ಪ್ರವಚನ ನೀಡಿದರು.
ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಿಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ನಡೆದ ಆಚರಣೆಯಲ್ಲಿ ಚರ್ಚಿನ ಮಹಿಳಾ ಸಂಘಟನೆಯ ಸದಸ್ಯರು ಸೇರಿದ ಭಕ್ತಾದಿಗಳಿಗೆ ಹೊಸ ತೆನೆಯನ್ನು ಬೆರೆಸಿದ ಸಿಹಿ ಪಾಯಸವನ್ನು ಹಂಚಿ ಹಬ್ಬದ ಸಂಭ್ರಮ ಆಚರಿಸಿದರು.


ಚರ್ಚಿನಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ ಹೊಸ ಭತ್ತದ ತೆನೆಗಳನ್ನು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜವನ್ನು ತಯಾರಿಸಿ ಕುಟುಂಬದ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು. ಹಬ್ಬದ ಅಡಿಗೆಯಲ್ಲಿ ಬೆಸ ಸಂಖ್ಯೆ ತರಕಾರಿಯ ಪಲ್ಯಗಳನ್ನು ತಯಾರಿಸುವುದು ಹಬ್ಬದ ಇನ್ನೊಂದು ವಿಶೇಷ. ಉಡುಪಿ, ಶಿರ್ವ, ಪಡುಬಿದ್ರೆ ಪರಿಸರದಲ್ಲಿ ಸಂಪೂರ್ಣ ಸಸ್ಯಹಾರವನ್ನು ಮಾಡಿದರೆ, ಕಲ್ಯಾಣಪುರದಿಂದ ಬೈಂದೂರಿನವರೆಗೆ ಇರುವ ಕ್ರೈಸ್ತರು ಸಸ್ಯಹಾರದೊಂದಿಗೆ ತಾಜಾ ಹೊಳೆ ಮೀನಿನ ಅಡುಗೆಯನ್ನು ಕೂಡ ಸವಿದರು. ತರಕಾರಿಗಳಲ್ಲಿ ಪ್ರಮುಖವಾಗಿ ಕೆಸುವಿನ ದಂಟು, ಬೆಂಡೆ, ಹೀರೆ, ಪಡವಲ, ಅಲಸಂಡೆ, ಹರಿವೆ ದಂಟು, ಪತ್ರೊಡೆ ಇನ್ನಿತರ ತರಕಾರಿ ಖಾದ್ಯಗಳನ್ನು ಹೆಚ್ಚಾಗಿ ಉಪಯೋಗಿಸುವುದು ಹಬ್ಬದ ವಿಶೇಷ. ಸಾಸ್ತಾನ ಸಂತ ಅಂತೋನಿಯವರ ಚರ್ಚಿನಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ವಿಶೇಷ ಪ್ರವಚನ ನೀಡಿದ ಚರ್ಚಿನ ಧರ್ಮಗುರು ವಂ. ವಾಲ್ಟರ್ ಮೆಂಡೊನ್ಸಾ, ಅವರು ಪ್ರಕ್ರತಿಯ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ವಿವರಿಸಿ ಇಂದು ಮಾನವನು ಪ್ಲಾಸ್ಟಿಕ್ ಉಪಯೋಗವನ್ನು ಹೆಚ್ಚು ಮಾಡುತ್ತಿದ್ದು ಇದರಿಂದ ಪರಿಸರವನ್ನು ಹೆಚ್ಚು ಹೆಚ್ಚು ಮಲಿನಗೊಳಿಸುತ್ತಿದ್ದಾನೆ. ಇದರಿಂದ ಪ್ರಾಕೃತಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತಿದ್ದು ಮುಂದಿನ ಪೀಳಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕುವಂತೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News