ಸೋಮೇಶ್ವರ ಬೀಚ್ ನಲ್ಲಿ ಹೀಗೊಂದು ‘ಸುನಾಮಿ’ ಕಾರ್ಯಾಚರಣೆ!

Update: 2016-09-08 10:51 GMT

ಮಂಗಳೂರು, ಸೆ.8: ಸೋಮೇಶ್ವರ ಬೀಚ್ ಸೌಂದರ್ಯ ನೋಡಲು ಬಂದಿದ್ದ ಕೆಲವರಿಗೆ ಇಂದು ಬೆಳಗ್ಗೆ 11:45ರ ಹೊತ್ತಿಗೆ ಗಾಬರಿ ಕಾಡಿತ್ತು. ಬೀಚ್‌ನುದ್ದಕ್ಕೂ ಪೊಲೀಸರು, ಕೋಸ್ಟ್ ಗಾರ್ಡ್‌ಗಳು, ಎನ್‌ಡಿಆರ್‌ಎಫ್‌ನ ಸಿಬ್ಬಂದಿ ಸುನಾಮಿ ಎಚ್ಚರಿಕೆ ನೀಡುತ್ತಾ ಸಾಗಿದ್ದರೆ, ಇತ್ತ ಬೀಚ್ ನೋಡಲು ಬಂದಿದ್ದ ಕೆಲವರು ಆತಂಕದಿಂದ ಅಲ್ಲಿದ್ದ ಸುರಕ್ಷಾ ವಾಹನಗಳನ್ನು ಹತ್ತಿದರು. ಕೆಲವರಂತೂ ಗಾಬರಿಯಿಂದ ಮೊಬೈಲ್ ಫೋನ್ ಬಿಟ್ಟು ಬಂದಿದ್ದೇವೆ ಎಂದು ಮತ್ತೆ ತಾವಿದ್ದ ಜಾಗಕ್ಕೆ ತೆರಳಿ ಮೊಬೈಲ್ ಹಿಡಿದು ವಾಹನ ಹತ್ತಿದ ಪ್ರಸಂಗವೂ ನಡೆಯಿತು. ಸೋಮೇಶ್ವರ ಬೀಚ್‌ನಲ್ಲಿ ‘ಸುನಾಮಿ’ ಅಣುಕು ಪ್ರದರ್ಶನದ ವೇಳೆ ಕಂಡು ಬಂದ ದೃಶ್ಯ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಇಂದು ದ.ಕ., ಉಡುಪಿ ಹಾಗೂ ಕಾರವಾರ ಜಿಲ್ಲೆಗಳನ್ನು ಒಳಗೊಂಡಂತೆ ಸುನಾಮಿ ವಿಪತ್ತು ನಿರ್ವಹಣಾ ಕುರಿತಂತೆ ಅಣಕು ಪ್ರದರ್ಶನ ನಡೆಯಿತು. ದ.ಕ. ಜಿಲ್ಲಾಡಳಿತದ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಸೋಮೇಶ್ವರದ ಬೆಟ್ಟಂಪಾಡಿ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ, ಕರಾವಳಿ ತಟ ರಕ್ಷಣಾ ಪಡೆ, ಗೃಹ ರಕ್ಷಕ ದಳ, ಕಂದಾಯ, ಸ್ಥಳೀಯ ಗ್ರಾ.ಪಂ., ಸ್ಥಳೀಯ ಪೊಲೀಸ್ ಸೇರಿದಂತೆ 20 ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಗಾಗಿ ಆಗಮಿಸಿದ್ದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಸಿಬ್ಬಂದಿ ಕೂಡಾ ಈ ಸಂದರ್ಭ ಸೋಮೇಶ್ವರ ಬೀಚ್‌ನಲ್ಲಿದ್ದ ಕಾರಣ, ತಂಡ 25 ಮಂದಿ ಸಿಬ್ಬಂದಿಯನ್ನೂ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಅಣುಕು ಪ್ರದರ್ಶನದನ್ವಯ, ಹೈದಾರಾಬಾದ್‌ನ ಇನ್‌ಕಾಯ್ಸೊ ಸಂಸ್ಥೆಯಿಂದ 11:30ರ ವೇಳೆಗೆ ಪಾಕಿಸ್ತಾನ ಕರಾವಳಿಯಿಂದ ಈ ಮೂರು ಜಿಲ್ಲೆಗಳಿಗೆ ಸುನಾಮಿ ಬರುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರಂತೆ ವಿವಿಧ ಇಲಾಖೆಗಳ ರಕ್ಷಣಾ ಸಿಬ್ಬಂದಿ ವಾಹನಗಳಲ್ಲಿ ತೆರಳಿ ಬೆಟ್ಟಂಪಾಡಿ ಗ್ರಾಮದ ಜನರನ್ನು ಅವರ ಮನೆಗಳಿಂದ ಸುರಕ್ಷಿತವಾಗಿ ಸುರಕ್ಷಾ ವಾಹನಗಳಲ್ಲಿ ಸೋಮೇಶ್ವರದ ಉಚ್ಚಿಲ ಬೋವಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಗಂಜಿ ಕೇಂದ್ರಕ್ಕೆ ತಲುಪಿಸಿದರು. ಅಸ್ವಸ್ಥರಾಗಿದ್ದವರನ್ನು ಆ್ಯಂಬುಲೆನ್ಸ್‌ಗಳಲ್ಲಿ ತರಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸುವ ಅಣುಕು ಕೂಡಾ ಪ್ರದರ್ಶನದ ಭಾಗವಾಗಿತ್ತು. ಇದಕ್ಕಾಗಿ ಪರಿಹಾರ ಕೇಂದ್ರದಲ್ಲಿ ವೈದ್ಯಕೀಯ ನೆರವು ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವಿವಿಧ ಇಲಾಖೆಗಳ ಸುಮಾರು 250ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲು ಪಡೆದಿದ್ದರು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಪತ್ತು ಸಮನ್ವಯ ಅಧಿಕಾರಿ ಡಾ.ಪ್ರದೀಪ್ ಮಾಹಿತಿ ನೀಡಿದರು. ಕಾರ್ಯಾಚರಣೆಯ ಉಪ ಮುಖ್ಯಸ್ಥರಾಗಿ ಸಹಾಯಕ ಆಯುಕ್ತ ಡಾ. ಅಶೋಕ್, ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪ ಕಾರ್ಯಾಚರಣಾ ಸಂಯೋಜಕ ಪ್ರಭು ವಿ.ವಿ., ಎಸಿಪಿ ಶ್ರುತಿ, ಗೃಹ ರಕ್ಷಕ ದಳದ ಡಾ. ಮುರಳಿ ಮೋಹನ ಚೂಂತಾರು, ಸಬ್ ಇನ್ಸ್‌ಪೆಕ್ಟರ್ ಭಾರತಿ ಸಹಕರಿಸಿದರು. 

ಪ್ರದರ್ಶನ ನೋಡಲು ಬಂದಿದ್ದೆವು, ಗಾಡಿ ಹತ್ತಿಸಿದರು...!

‘‘ನಮಗೆ ಸುನಾಮಿ ಸಂದರ್ಭ ಸುರಕ್ಷಾ ಕ್ರಮಗಳ ಕುರಿತಂತೆ ಅಣುಕು ಪ್ರದರ್ಶನ ನಡೆಯಲಿದೆ ಎಂದು ತಿಳಿದಿತ್ತು. ಏನು ಮಾಡುತ್ತಾರೆ ನೋಡೋಣವೆಂದು ಮನೆಯಿಂದ ಬೀಚ್ ಹತ್ತಿರ ನಡೆದುಕೊಂಡು ಬರಬೇಕಾದರೆ, ನಮ್ಮನ್ನು ಪೊಲೀಸು ಜೀಪಿನಲ್ಲಿ ಹತ್ತಿಸಿದರು. ಮನೆಗೆ ಕರೆ ಮಾಡೋಣವೆಂದರೆ ಕರೆ ಹೋಗುತ್ತಿಲ್ಲ. ಒಟ್ಟಿನಲ್ಲಿ ಮನೆಯವರು ಗಾಬರಿಯಾಗಿರಬಹುದು’’ ಎಂದು ಸೈಂಟ್ ಆ್ಯಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರೀತಿ ಮತ್ತು ನಿಶಿ ಅಣುಕು ಪ್ರದರ್ಶನದ ಅನುಭವ ಹಂಚಿಕೊಂಡರು.

ತುರ್ತು ಸಂದರ್ಭದಲ್ಲಿ ಇಲಾಖೆಗಳ ನಡುವೆ ಸಮನ್ವಯತೆಗೆ ಸಹಕಾರಿ: ಎಡಿಸಿ
‘‘ಸೋಮೇಶ್ವರ ಬೆಟ್ಟಂಪಾಡಿ ಗ್ರಾಮದ ಜನರಿಗೆ ನಿನ್ನೆಯೇ ಸುನಾಮಿ ಅಣುಕು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಸಮುದ್ರದಿಂದ ಸುಮಾರು 50 ಮೀಟರ್ ದೂರದಲ್ಲಿ 200 ಮನೆಗಳಿದ್ದು, ಸುಮಾರು 300 ಮಂದಿಯ ರಕ್ಷಣಾ ಕಾರ್ಯಚರಣೆಯನು ಅಣುಕು ಪ್ರದರ್ಶನದ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಈ ಅಣುಕು ಕಾರ್ಯಾಚರಣೆ ತುರ್ತು ಅಪಾಯಗಳ ಸಂದರ್ಭ ಇಲಾಖೆಗಳ ನಡುವೆ ಸಮನ್ವಯತೆಯನ್ನು ಕಾಯ್ದುಕೊಳ್ಳುವುದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವುದು ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಪ್ರಮುಖವಾಗಿದೆ’’ ಎಂದು ಅಣುಕು ಕಾರ್ಯಾಚರಣೆಯ ಮುಖ್ಯಸ್ಥ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News