×
Ad

ವಂಚಕನ ‘ಪ್ರೇಮ ಪಾಶಕ್ಕೆ’ ಸಿಲುಕಿ ರೂ. 94.5 ಲಕ್ಷ ಕಳೆದುಕೊಂಡ ವೃದ್ಧೆ!

Update: 2016-09-08 19:28 IST

ಪುಣೆ, ಸೆ.8: ಮದುವೆಯಾಗುವ ಭರವಸೆ ನೀಡಿ 64ರ ಹರೆಯದ ಮಹಿಳೆಯೊಬ್ಬಳಿಗೆ ರೂ. 94.5 ಲಕ್ಷ ವಂಚನೆಯೆಸಗಿರುವ ಆರೋಪಿಯೊಬ್ಬನ ವಿರುದ್ಧ ಚತುಃಶೃಂಗಿಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಂಡನ್‌ನವನೆನ್ನಲಾಗಿರುವ ಹಾರ್ಲಿ ಬೆನ್ಸನ್ ಎಂಬಾತ ಆರೋಪಿಯಾಗಿದ್ದು, ಮಹಿಳೆ ಮಂಗಳವಾರ ಪೊಲೀಸ್ ದೂರು ದಾಖಲಿಸಿದ್ದಳು.
ಫರ್ಗ್ಯೂಸನ್ ಕಾಲೇಜು ರಸ್ತೆಯಾಚೆಗಿನ ಮಾಡೆಲ್ ಕಾಲನಿಯ ನಿವಾಸಿಯಾಗಿರುವ ಈ ವಿಧವೆ ಮಹಿಳೆಯೊಂದಿಗೆ ಶಂಕಿತನು ಫೇಸ್‌ಬುಕ್‌ನ ಮೂಲಕ ಸ್ನೇಹ ಬೆಳೆಸಿಕೊಂಡಿದ್ದನು. ಬೆನ್ಸನ್ ಹಾಗೂ ಮಹಿಳೆ ಸೆಲ್ ಫೋನ್ ನಂಬರ್‌ಗಳನ್ನು ವಿನಿಮಯಿಸಿಕೊಂಡು 2016ರ ಮೇಯಲ್ಲಿ ಪರಸ್ಪರ ಎಸ್‌ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಲಾರಂಭಿಸಿದ್ದರು.
ಆರೋಪಿಯು ಒಂದೆರಡು ತಿಂಗಳ ಹಿಂದೆ ಮಹಿಳೆಗೆ ತನ್ನ ಪ್ರೇಮವನ್ನು ನಿವೇದಿಸಿ, ಮದುವೆಯಾಗುವ ಭರವಸೆ ನೀಡಿದ್ದನು. ತಾನು ಭಾರತದಲ್ಲಿ ವಾಸವಾಗಲು ಬಯಸುತ್ತಿದ್ದೇನೆನ್ನುವ ಮೂಲಕ ಆತ ಮಹಿಳೆಯ ವಿಶ್ವಾಸ ಗಳಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಗಂಡ 2014ರಲ್ಲಿ ನಿಧನವಾಗಿದ್ದು, ಮಗಳು ಅಮೆರಿಕದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಮಹಿಳೆ ನಗರದಲ್ಲಿ ಒಬ್ಬಂಟಿಯಾಗಿದ್ದಳು. ಆಕೆ ಈ ಹಿಂದೆ ಕೇಂದ್ರ ಸರಕಾರದ ಪ್ರತಿಷ್ಠಿತ ಸಂಶೋಧನ ಸಂಸ್ಥೆಯೊಂದರಲ್ಲಿ ಅಧ್ಯಾಪಿಕೆಯಾಗಿ ಕೆಲಸ ಮಾಡುತ್ತಿದ್ದು, ಈಗ ನಿವೃತ್ತಳಾಗಿದ್ದಾಳೆ. ಈ ವರ್ಷ ಜು.27ರಂದು ಮಹಿಳೆಗೆ ಕರೆ ಮಾಡಿದ್ದ ಬೆನ್ಸನ್, ತಾನು ಪುಣೆಗೆ ಸ್ಥಳಾಂತರವಾಗುತ್ತಿದ್ದೇನೆ. ತನ್ನಲ್ಲಿ 95 ಸಾವಿರ ಡಾಲರ್ ವೌಲ್ಯದ ಚಿನ್ನ ಹಾಗೂ ವಜ್ರಗಳಿವೆಯೆಂದು ಆತ ಹೇಳಿದ್ದನೆಂದು ಪೊಲೀಸ್ ನಿರೀಕ್ಷಕ ಯು.ಬಿ.ಶಿಂಗಾಡೆ ವಿವರಿಸಿದ್ದಾರೆ.
ಒಂದೆರಡು ದಿನಗಳ ಬಳಿಕ ಮತ್ತೆ ಮಹಿಳೆಗೆ ಕರೆ ಮಾಡಿದ್ದ ಬೆನ್ಸನ್, ತನ್ನನ್ನು ಭಾರತದ ಕಸ್ಟಂಸ್ ಅಧಿಕಾರಿಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಹಿಡಿದಿದ್ದು, ಚಿನ್ನ ಹಾಗೂ ವಜ್ರಗಳಿಗಾಗಿ ದಂಡ ಪಾವತಿಸುವಂತೆ ಆಗ್ರಹಿಸುತ್ತಿದ್ದಾರೆ. ತಾನು ಆ ದಂಡ ಪಾವತಿಸುವಷ್ಟು ನಗದು ಹಣ ತಂದಿಲ್ಲವೆಂದು ಹೇಳಿದ್ದನು.
ಬೆನ್ಸನ್ ತನಗೆ ಕೆಲವು ಬ್ಯಾಂಕ್ ಖಾತೆಗಳ ನಂಬರ್‌ಗಳನ್ನು ನೀಡಿ ಅವುಗಳಿಗೆ ಹಣ ಹಾಕುವಂತೆ ವಿನಂತಿಸಿದ್ದನು. ತಾನು ಕೆಲವು ಸಮಯದೊಳಗೆ ಆ ಖಾತೆಗಳಿಗೆ ರೂ. 94.5 ಲಕ್ಷ ಜಮೆ ಮಾಡಿದ್ದೆನು. ಹಣ ಪಡೆದ ಬಳಿಕ ಬೆನ್ಸನ್ ತನ್ನ ಸೆಲ್ ಫೋನನ್ನು ನಿಷ್ಕ್ರಿಯಗೊಳಿಸಿದನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿಗೆ ಹಣ ಕೊಡುವುದಕ್ಕಾಗಿ ಮಹಿಳೆ ತನ್ನ ಜಮೀನಿನ ತುಂಡೊಂದನ್ನು ಮಾರಿದ್ದಳು. ಪೊಲೀಸರು ಬ್ಯಾಂಕ್ ಖಾತೆಗಳ ವಿವರ ಪಡೆದಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆಂದು ಶಿಂಗಾಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News