×
Ad

ಪುತ್ತೂರು: ಎಚ್‌ಟಿ ಲೈನ್‌ನಲ್ಲಿ ಬೆಂಕಿ: ತಪ್ಪಿದ ಅಪಾಯ

Update: 2016-09-08 19:32 IST

ಪುತ್ತೂರು, ಸೆ.8: ವಿದ್ಯುತ್ ಎಚ್‌ಟಿ ಲೈನ್‌ನಲ್ಲಿ ಕಂಡು ಬಂದ ಬೆಂಕಿಯಿಂದಾಗಿ ಹಲವು ಜಂಪರ್‌ಗಳಿಗೆ ಹಾನಿಯುಂಟಾಗಿದ್ದರೂ ಅದೃಷ್ಟವಶಾತ್ ಭಾರೀ ಅನಾಹುತವೊಂದು ಕ್ಷಣಮಾತ್ರದಲ್ಲಿ ತಪ್ಪಿದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮಾಯಂಗಳ ಕೂಡುರಸ್ತೆ ಎಂಬಲ್ಲಿ ನಡೆದಿದೆ.

ಕೂಡುರಸ್ತೆಯಲ್ಲಿ ಸರ್ವಿಸ್ ವಯರ್ ಎಳೆಯಲೆಂದು ವಿದ್ಯುತ್ ಕಂಬಕ್ಕೆ ಹತ್ತಿದ್ದ ವ್ಯಕ್ತಿಯ ಬೇಜವಾಬ್ದಾರಿ ಕೃತ್ಯದಿಂದಾಗಿ ಈ ಘಟನೆ ನಡೆದಿರುವುದಾಗಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ದೂರು ನೀಡಿದ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನರಿಮೊಗರು ಗ್ರಾಮದ ಮಾಯಂಗಳ ಕೂಡುರಸ್ತೆಯಲ್ಲಿ ಶಾಂತಿಗೋಡು ಮತ್ತು ಕ್ಯಾಂಪ್ಕೊ ಫೀಡರ್‌ನಿಂದ ಬರುವ ತಲಾ 11 ಸಾವಿರ ಮೆಗಾವ್ಯಾಟ್ ಪವರ್ ಇರುವ ಎಚ್.ಟಿ ಲೈನ್‌ನ ವಿದ್ಯುತ್ ಕಂಬದಲ್ಲಿ ಶಾಂತಿಗೋಡು ಆನಡ್ಕ ನಿವಾಸಿ ಚೆನ್ನಪ್ಪ ನಾಯ್ಕರ ಪುತ್ರ ದಿನೇಶ್ ಎಂಬವರು ಸರ್ವಿಸ್ ವಯರ್ ಎಳೆಯುವ ಸಮಯದಲ್ಲಿ ಎರಡೂ ಲೈನ್‌ಗಳು ಒಂದಕ್ಕೊಂದು ತಾಗಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಜಂಪರ್‌ಗಳಿಗೆ ಹಾನಿಯಾಗಿದೆ. ಅದೇ ಸಮಯದಲ್ಲಿಯೂ ಇತರ ಲೈನ್‌ಗಳಲ್ಲಿ ವಿದ್ಯುತ್ ಹರಿದು ಭಾರೀ ದೊಡ್ಡ ಅನಾಹುತವಾಗುವ ಸಾಧ್ಯತೆ ಇದ್ದುದರಿಂದ ಮತ್ತು ಅನುಮತಿ ಇಲ್ಲದೆ ಕಂಬಕ್ಕೆ ಹತ್ತಿರುವ ಕಾರಣಕ್ಕಾಗಿ ದಿನೇಶ್‌ರ ವಿರುದ್ಧ ಪುತ್ತೂರು ಮೆಸ್ಕಾಂ ಇಲಾಖೆ ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಿನೇಶ್‌ರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಿಂದಾಗಿ ಸುಮಾರು 4 ಗಂಟೆ ಹೊತ್ತು ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆ ಉಂಟಾಗಿತ್ತು ಎಂದು ಮೆಸ್ಕಾಂ ಇಲಾಖೆಯವರು ತಿಳಿಸಿದ್ದಾರೆ.

ದೊಡ್ಡ ಅನಾಹುತ ಸಾಧ್ಯತೆ

ಪುತ್ತೂರು ಕ್ಯಾಂಪ್ಕೊದಿಂದ ಹೋಗುವ ಎಚ್‌ಟಿ ಲೈನ್ ಮತ್ತು ಶಾಂತಿಗೋಡಿನಿಂದ ಬರುವ ಎಚ್‌ಟಿ ಲೈನ್‌ಗಳಿಗೆ ಜಂಪರ್ ಅಳವಡಿಸಲಾಗಿದೆ. ಶಾಂತಿಗೋಡು ಕಡೆ ವಿದ್ಯುತ್ ಸಂಪರ್ಕವಿಲ್ಲದ ಸಮಯ ಕ್ಯಾಂಪ್ಕೊದ ಲೈನ್, ಕ್ಯಾಂಪ್ಕೊ ಫೀಡರ್‌ನಲ್ಲಿ ವಿದ್ಯುತ್ ಇಲ್ಲದ ಸಮಯ ಶಾಂತಿಗೋಡು ಲೈನ್‌ಗೆ ಕನೆಕ್ಷನ್ ನೀಡುವ ಉದ್ದೇಶದಿಂದ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಇವೆರಡೂ ಲೈನ್‌ಗಳಲ್ಲಿ ತಲಾ 11ಸಾವಿರ ಮೆಗಾ ವೋಲ್ಟೇಜ್ ಇರುತ್ತದೆ.

ಇವೆರಡೂ ಲೈನ್‌ಗಳಲ್ಲಿ ವಿದ್ಯುತ್ ಇರುವ ವೇಳೆ ಅವನ್ನು ಒಂದಕ್ಕೊಂದು ಸೇರಿಸಿದರೆ ವಿದ್ಯುತ್ ದುಪ್ಪಟ್ಟು ಆಗಿ ಬೇರೆ ಫೀಡರ್‌ಗಳಲ್ಲಿ ವಿದ್ಯುತ್ ದುರಸ್ಥಿ ಕಾರ್ ನಡೆಯುತ್ತಿದ್ದರೆ ಅಲ್ಲಿ ಸಾವು ನೋವು ಸಂಭವಿಸುವ ಅಪಾಯ ಹಾಗೂ ವಯರ್‌ಗಳು ತುಂಡಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಹತ್ತಲೂ ಮೆಸ್ಕಾಂ ಅನುಮತಿ ಪಡೆಯಬೇಕು. ಆದರೆ ಕೂಡುರಸ್ತೆಯಲ್ಲಿ ಬೇಜವಾಬ್ದಾರಿಯಾಗಿ ವ್ಯಕ್ತಿಯೋರ್ವರು ವರ್ತಿಸಿರುವುದು ಅಪರಾಧ ಎಂದು ಮೆಸ್ಕಾಂ ಎಇ. ರಾಮಚಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News