ಆಂಧ್ರಪ್ರದೇಶಕ್ಕೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಘೋಷಣೆ ವಿಪಕ್ಷಗಳಿಂದ ತಿರಸ್ಕಾರ-ವಿಧಾನಸಭಾ ಕಲಾಪಕ್ಕೆ ಅಡ್ಡಿ
ಹೊಸದಿಲ್ಲಿ, ಸೆ.8: ತೆಲಂಗಾಣ ರಾಜ್ಯ ರಚನೆಗಾಗಿ ಅಖಂಡ ಆಂಧ್ರಪ್ರದೇಶದ ವಿಭಜನೆಯಿಂದ ಉಂಟಾಗಿರುವ ಕಂದಾಯ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರಕಾರವು ಆಂಧ್ರಪ್ರದೇಶಕ್ಕೆ ಹೆಚ್ಚು ಆರ್ಥಿಕ ಸಹಕಾರವನ್ನು ಘೋಷಿಸಿದೆ. ಆದರೆ, ರಾಜ್ಯಕ್ಕೆ ‘ವಿಶೇಷ ಸ್ಥಾನಮಾನ’ ನೀಡಿಕೆಗಿಂತ ಕಡಿಮೆಯದು ಯಾವೂದೂ ಸಾಕಾಗದೆಂದು ವಿಪಕ್ಷಗಳು ಹೇಳುತ್ತಿವೆ.
ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಬುಧವಾರ ರಾತ್ರಿ ರಾಜ್ಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಆದರೆ, ಅದನ್ನು ತಿರಸ್ಕರಿಸಿರುವ ಕಾಂಗ್ರೆಸ್ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಶಾಸಕರು ಇಂದು ವಿಧಾನ ಸಭೆಯ ಮಳೆಗಾಲದ ಅಧಿವೇಶನದ ಆರಂಭದ ಕಲಾಪಕ್ಕೆ ಅಡ್ಡಿಮಾಡಿ, ‘ವಿಶೇಷ ಸ್ಥಾನಮಾನ ಆಂಧ್ರದ ಹಕ್ಕು’ ಎಂಬ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯದ ಹಿತಾಸಕ್ತಿಯೊಂದಿಗೆ ‘ರಾಜಿ ಮಾಡಿಕೊಂಡಿದ್ದಾರೆಂದು’ ಅವರು ಆರೋಪಿಸಿದರು.
ಜಗನ್ ರೆಡ್ಡಿ ನೇತೃತ್ವದ ವೈಎಸ್ಸಾರ್ ಕಾಂಗ್ರೆಸ್ ಶನಿವಾರ ಬಂದ್‌ಗೆ ಕರೆ ನಿಡಿದ್ದು, ಎಡ ಪಕ್ಷಗಳು ಅದಕ್ಕೆ ಬೆಂಬಲ ಸೂಚಿಸಿವೆ.
ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿಯ ಭಾಗಿದಾರ ಪಕ್ಷವಾಗಿದೆ.
ತೆಲಂಗಾಣ ವಿಭನೆಯ ಮೊದಲು ಕೇಂದ್ರ ಸರಕಾರ ನೀಡಿದ್ದ ವಿಶೇಷ ಸ್ಥಾನಮಾನದ ವಾಗ್ದಾನವನ್ನು ಈಡೇರಿಸಲು ಟಿಡಿಪಿ ಹಾಗೂ ಬಿಜೆಪಿ ವಿಫಲವಾಗಿವೆಯೆಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರದ ನಿನ್ನೆಯ ಘೋಷಣೆ ಟೀಕೆಗಳನ್ನು ತಣ್ಣಗಾಗಿಸಬಹುದೆಂಬ ಆಶಾಭಾವ ನಾಯ್ಡು ಅವರದಾಗಿದೆ. ಆದಾಗ್ಯೂ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಅವರೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಸಾಲದ ಬದಲು ಅನುದಾನದ ರೂಪದಲ್ಲಿ ಕೇಂದ್ರದಿಂದ ಹೆಚ್ಚು ಅನುದಾನ ದೊರೆಯುವ ನಿರೀಕ್ಷೆ ಅವರದಾಗಿದೆ.