ಯುವತಿಗೆ ಹಲ್ಲೆ ನಡೆಸಿ ಸರ ಕಸಿದುಕೊಂಡ ಪ್ರಕರಣ: ಅಪರಾಧಿಗೆ 2 ವರ್ಷ ಗಂಭೀರ ಶಿಕ್ಷೆ
ಪುತ್ತೂರು, ಸೆ.8: ಗೋಳಿತೊಟ್ಟು ಸಮೀಪ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಯುವತಿಯೋರ್ವರ ತಲೆಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆಗೈದು ಬಳಿಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತಾಗಿದ್ದು ಅಪರಾಧಿಗೆ ಪುತ್ತೂರಿನ ನ್ಯಾಯಾಲಯ 2 ವರ್ಷ ಗಂಭೀರ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
2012ರ ಫೆ.3ರಂದು ಪುತ್ತೂರು ತಾಲೂಕಿನ ಗೋಳಿತೊಟ್ಟು ಸಣ್ಣಂಪಾಡಿ ಈಶ್ವರ ನಾಯ್ಕ ಎಂಬವರ ಪುತ್ರಿ ಪುತ್ತೂರಿನ ಎಲ್‌ಐಸಿ ಪ್ರತಿನಿಧಿಯೋರ್ವರ ಕಚೇರಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಶಾರದಾ ಎಂಬವರು ಗೋಳಿತೊಟ್ಟಿನಲ್ಲಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಣ್ಣಂಪಾಡಿ ಹಾದಿಯ ನಿರ್ಜನ ಪ್ರದೇಶದಲ್ಲಿ ಆಕೆಗೆ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಕೆ.ಎ. ಶಿಬು ಎಂಬವರು ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆಕೆಯ ಕುತ್ತಿಗೆಯಲ್ಲಿದ್ದ 12 ಗ್ರಾಂ. ತೂಕದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದರು.
ಪ್ರಾರಂಭದಲ್ಲಿ ಪ್ರಕರಣ ನಡೆಸಿದ ವ್ಯಕ್ತಿಯ ಗುರುತು ಪರಿಚಯ ಸಿಕ್ಕಿರಲಿಲ್ಲ. ಪೊಲೀಸ್ ತನಿಖೆ ವೇಳೆ ಆರೋಪಿ ಸ್ಥಳೀಯ ರಬ್ಬರ್ ಟ್ಯಾಪರ್ ಎಂದು ಮಾಹಿತಿ ತಿಳಿದು ಬಳಿಕ ಶಿಬುರವರನ್ನು ಬಂಧಿಸಲಾಗಿತ್ತು. ಉಪ್ಪಿನಂಗಡಿ ಎಸ್ಸೈ ಜಗದೀಶ್ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯ್ ಕುಮಾರ್, ಆರೋಪಿ ಶಿಬುಗೆ 2 ವರ್ಷ ಗಂಭೀರ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕ ಪ್ರತಾಪ್ ವಾದಿಸಿದರು.