ನಿಂದನೆ ಬಳಿಕ ಒಬಾಮ, ಫಿಲಿಪ್ಪೀನ್ಸ್ ಅಧ್ಯಕ್ಷ ಭೇಟಿ
ವಿಯಂಟಿಯಾನ್, ಸೆ. 8: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಅವಾಚ್ಯವಾಗಿ ನಿಂದಿಸಿದ ಘಟನೆಯ ಬಳಿಕ, ಇಬ್ಬರು ನಾಯಕರು ಗುರುವಾರ ಕೊಂಚ ಹೊತ್ತು ಅನೌಪಚಾರಿಕವಾಗಿ ಭೇಟಿಯಾದರು ಎಂದು ಫಿಲಿಪ್ಪೀನ್ಸ್ ಅಧಿಕಾರಿಗಳು ತಿಳಿಸಿದರು.
ಇಲ್ಲಿ ನಡೆಯುತ್ತಿರುವ ಪೂರ್ವ ಏಶ್ಯ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಈ ಭೇಟಿ ನಡೆಯಿತು.
ಮಾದಕ ದ್ರವ್ಯ ಮಾಫಿಯದ ವಿರುದ್ಧ ತಾನು ಹೂಡಿರುವ ಸಮರದ ವಿಷಯದಲ್ಲಿ ಆಸಿಯಾನ್ ಶೃಂಗ ಸಮ್ಮೇಳನದ ವೇಳೆ ಅಮೆರಿಕದ ಅಧ್ಯಕ್ಷರ ಉಪನ್ಯಾಸ ಕೇಳಲು ತಾನು ತಯಾರಿಲ್ಲ, ಅವರು (ಒಬಾಮ) ಲಜ್ಜೆಗೆಟ್ಟ ಹೆಂಗಸಿನ ಮಗ ಎಂದು ಸೋಮವಾರ ರಾಡ್ರಿಗೊ ಹೇಳಿದ್ದರು. ಈ ಹೇಳಿಕೆಯ ಬಳಿಕ ಹಲವು ಬೆಳವಣಿಗೆಗಳು ನಡೆದು, ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಮಂಗಳವಾರ ನಿಗದಿಯಾಗಿದ್ದ ಫಿಲಿಪ್ಪೀನ್ಸ್ ಅಧ್ಯಕ್ಷರ ಭೇಟಿಯನ್ನು ಒಬಾಮ ರದ್ದುಗೊಳಿಸಿದ್ದರು.
‘‘ಸಮ್ಮೇಳನ ಕೋಣೆಯಲ್ಲಿ ಅವರು ಭೇಟಿಯಾದರು. ಎಲ್ಲರೂ ಹೋದ ಬಳಿಕ ಅವರು ಕೋಣೆಯಿಂದ ಹೊರಟರು. ಅವರು ಎಷ್ಟು ಸಮಯ ಮಾತನಾಡಿದರು ಎಂದು ನಾನು ಹೇಳಲಾರೆ. ಅಮೆರಿಕ ಮತ್ತು ಫಿಲಿಪ್ಪೀನ್ಸ್‌ಗಳ ನಡುವಿನ ಬಾಂಧವ್ಯ ಸುದೃಢವಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಾಧ್ಯವಾಯಿತು. ಈ ಎರಡು ದೇಶಗಳ ನಡುವೆ ಐತಿಹಾಸಿಕ ಬಾಂಧವ್ಯವಿದೆ ಹಾಗೂ ಉಭಯ ನಾಯಕರಿಗೂ ಈ ವಿಷಯ ಗೊತ್ತಿದೆ. ಈ ಭೇಟಿ ನಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ’’ ಎಂದು ಫಿಲಿಪ್ಪೀನ್ಸ್ ವಿದೇಶ ಕಾರ್ಯದರ್ಶಿ ಪರ್ಫೆಕ್ಟೊ ಯಸಾಯ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಭಾರತ, ಅಮೆರಿಕದೊಂದಿಗಿನ ಶೃಂಗ ಸಭೆ ತಪ್ಪಿಸಿಕೊಂಡ ರಾಡ್ರಿಗೊ
ಅಮೆರಿಕ ಮತ್ತು ಭಾರತೀಯ ನಾಯಕರೊಂದಿಗೆ ಆಗ್ನೇಯ ಏಶ್ಯ ನಾಯಕರ ಭೇಟಿ ಕಾರ್ಯಕ್ರಮವನ್ನು ತಲೆನೋವಿನಿಂದಾಗಿ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ತಪ್ಪಿಸಿಕೊಂಡಿದ್ದಾರೆ.
ತೀವ್ರ ತಲೆನೋವಿನಿಂದ ಬಳಲುತ್ತಿರುವ ರಾಡ್ರಿಗೊ ಅವರಿಗೆ ಈ ಶೃಂಗ ಸಭೆಯಲ್ಲಿ ಗಮನ ಕೇಂದ್ರೀಕರಿಸುವುದು ಕಷ್ಟವಾಗಿತ್ತು ಎಂದು ಅಧ್ಯಕ್ಷರ ವಕ್ತಾರರೊಬ್ಬರು ಗುರುವಾರ ತಿಳಿಸಿದರು.
ಫಿಲಿಪ್ಪೀನ್ಸ್ ಅಧ್ಯಕ್ಷರ ಮಗಳು ಹಾಗೂ ದಕ್ಷಿಣ ಫಿಲಿಪ್ಪೀನ್ಸ್ ನಗರ ಡವಾವೊದ ಮೇಯರ್‌ಗೆ ಗರ್ಭಸ್ರಾವವಾಗಿರುವುದಕ್ಕೂ ಅವರು ಸಭೆಯಿಂದ ಹೊರಗುಳಿದಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ, ತನಗೆ ಗೊತ್ತಿಲ್ಲ ಎಂದು ವಕ್ತಾರರು ಉತ್ತರಿಸಿದರು.