ಮುಂಬೈ:ನರ್ಸ್ ಮೇಲೆ ಆ್ಯಸಿಡ್ ಎರಚಿದ್ದ ವ್ಯಕ್ತಿಗೆ ಮರಣ ದಂಡನೆ
ಮುಂಬೈ,ಸೆ.8: ಇಲ್ಲಿಯ ಬಾಂದ್ರಾ ರೈಲು ನಿಲ್ದಾಣದಲ್ಲಿ ನರ್ಸ್ ಓರ್ವಳ ಮೇಲೆ ಆ್ಯಸಿಡ್ ಎರಚಿ ಆಕೆಯ ಸಾವಿಗೆ ಕಾರಣನಾಗಿದ್ದ ಅಂಕುರ್ ಪನ್ವಾರ್ ಎಂಬಾತನಿಗೆ ಸ್ಥಳೀಯ ನ್ಯಾಯಾಲಯವು ಗುರುವಾರ ಮರಣದಂಡನೆಯನ್ನು ಪ್ರಕಟಿಸಿದೆ. ಆತ ದೋಷಿಯೆಂದು ನ್ಯಾಯಾಲಯವು ಕಳೆದ ವಾರ ಘೋಷಿಸಿತ್ತು.
2013ರಲ್ಲಿ ಈ ಘಟನೆ ನಡೆದಿತ್ತು. ದಿಲ್ಲಿ ನಿವಾಸಿ ಪ್ರೀತಿ ರಥಿ(23) ಭಾರತೀಯ ನೌಕಾಪಡೆಯಲ್ಲಿ ನರ್ಸ್ ಹುದ್ದೆಗೆ ಸೇರಲು ತನ್ನ ತಂದೆ ಅಮರಸಿಂಗ್ ರಥಿ ಅವರೊಂದಿಗೆ ರೈಲಿನಲ್ಲಿ ಮುಂಬೈಗೆ ಆಗಮಿಸಿದ್ದಳು. ದಿಲ್ಲಿಯಲ್ಲಿ ಆಕೆಯ ನೆರೆಮನೆಯ ನಿವಾಸಿಯಾಗಿದ್ದ ಪನ್ವಾರ್ ಕೂಡ ಅದೇ ರೈಲಿನಲ್ಲಿದ್ದ. ಬಾಂದ್ರಾ ನಿಲ್ದಾಣದಲ್ಲಿ ರೈಲಿನಿಂದಿಳಿದು ತಂದೆಯ ಜೊತೆಗೆ ಹೆಜ್ಜೆ ಹಾಕುತ್ತಿದ್ದ ಪ್ರೀತಿಯ ಹಿಂದೆಯೇ ಇದ್ದ, ಗುರುತು ಸಿಗದಂತೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದ ಪನ್ವಾರ್ ಆಕೆಯ ಭುಜವನ್ನು ತಟ್ಟಿದ್ದ. ಆಕೆ ಹಿಂದಕ್ಕೆ ತಿರುಗುತ್ತಿದ್ದಂತೆ ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ.
ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಪ್ರೀತಿ ಕೊನೆಗೂ ಅಸು ನೀಗಿದ್ದಳು. ಮುಖದ ಮೇಲೆ ಬಿದ್ದಿದ್ದ ಆ್ಯಸಿಡ್‌ನ್ನು ಆಕೆ ಅಕಸ್ಮಾತ್ತಾಗಿ ನುಂಗಿದ್ದರಿಂದ ಗಂಟಲು ಮತ್ತು ಶ್ವಾಸಕೋಶಗಳು ಸುಟ್ಟುಹೋಗಿದ್ದವು.
ಆ್ಯಸಿಡ್ ದಾಳಿಯ ಬಳಿಕ ಬೇರೊಂದು ರೈಲು ಹತ್ತಿ ಮುಂಬೈನಿಂದ ಪರಾರಿಯಾಗಿದ್ದ ಪನ್ವಾರ್ ಒಂದು ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದ.
ನ್ಯಾಯಾಧೀಶರು ಪನ್ವಾರ್‌ಗೆ ಮರಣದಂಡನೆ ವಿಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಸಿಂಗ್ ರಥಿ,ನನ್ನ ಮಗಳು ನರಳಿದಂತೆ ಆತನೂ ಜೀವನದ ಅಂತ್ಯದವರೆಗೂ ನರಳಬೇಕು. ಆತನಿಗೆ ಲಘು ಶಿಕ್ಷೆಯನ್ನು ವಿಧಿಸಿದ್ದಿದ್ದರೆ ಅದು ತಪ್ಪು ಸಂದೇಶವನ್ನು ನೀಡುತ್ತಿತ್ತು ಎಂದರು.
ಪನ್ವಾರ್‌ಗೆ ಪ್ರೀತಿಯ ಬಗ್ಗೆ ಅಸೂಯೆಯಿತ್ತು. ನಿರುದ್ಯೋಗಿಯಾಗಿದ್ದಕ್ಕೆ ತನ್ನನ್ನು ಸದಾ ಬೈಯ್ಯುತ್ತಿದ್ದ ಮನೆಯವರು ಪ್ರೀತಿಯನ್ನು ಹೊಗಳುತ್ತಿದ್ದರಿಂದ ಆತ ಹತಾಶನಾಗಿದ್ದ. ಹೀಗಾಗಿ ಆತ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಎಂದು ಪೊಲೀಸರು ತಿಳಿಸಿದರು.
ಪನ್ವಾರ್ ಪ್ರೀತಿಗೆ ಕಿರುಕುಳ ನೀಡುತ್ತಿದ್ದ,ಅಲ್ಲದೆ ತನ್ನನ್ನು ಮದುವೆಯಾಗುವಂತೆಯೂ ಪೀಡಿಸುತ್ತಿದ್ದ. ಪ್ರೀತಿ ನಿರಾಕರಿಸಿದಾಗ ಆತ ಆಕೆಗೆ ಪಾಠ ಕಲಿಸಲು ನಿರ್ಧರಿಸಿದ್ದ ಎಂದು ಸರಕಾರಿ ವಕೀಲ ಉಜ್ವಲ್ ನಿಕ್ಕಂ ತಿಳಿಸಿದರು.