ಆವಾಝ್-ಎ-ಪಂಜಾಬ್ ಪಕ್ಷಕ್ಕೆ ಸಿಧು ಚಾಲನೆ
ಚಂಡಿಗಡ, ಸೆ.8: ಕ್ರಿಕೆಟಿಗ ರಾಜಕಾರಣಿ ನವಜೋತ್ ಸಿಂಗ್ ಸಿಧು, ಗುರುವಾರ ತನ್ನ ಹೊಸ ಪಕ್ಷ ಆವಾಝ್-ಎ-ಪಂಜಾಬ್ ಪಕ್ಷಕ್ಕೆ ಔಪಚಾರಿಕ ಚಾಲನೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಪರ ಪ್ರಚಾರಕ್ಕಾಗಿ ಪಂಜಾಬ್‌ಗೆ ಬಂದಿದ್ದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಎಎಪಿಯೊಂದಿಗೆ ತನ್ನ ಹಿಂದಿನ ಪಕ್ಷ ಬಿಜೆಪಿಯ ವಿರುದ್ಧವೂ ಹರಿಹಾಯ್ದ ಸಿಧು, ಈ ಪಕ್ಷಗಳು ಜನರನ್ನು ‘ಅಲಂಕಾರ ಸಾಮಗ್ರಿಗಳಂತೆ’ ಬಳಸಿಕೊಳ್ಳುತ್ತಿದೆಯೆಂದು ಆರೋಪಿಸಿದ್ದಾರೆ.
ತನ್ನ ಹಾಗೂ ಕೇಜ್ರಿವಾಲ್‌ರ ಭೇಟಿಯ ಬಗ್ಗೆ ಆಯ್ದ ಸೋರಿಕೆಯನ್ನು ಮಾಡಲಾಗಿತ್ತು. ಅವರು ತನ್ನ ಪಕ್ಷಕ್ಕೆ ಸೇರುವಂತೆ ತನ್ನ ಪತ್ನಿಯ ಬಳಿಯೇ ಮಾತುಕತೆಯಲ್ಲಿ ನಿರತರಾಗಿದ್ದರು. ಅದು ಸರಿಯಲ್ಲ. ತನ್ನ ರಾಜೀನಾಮೆಗೂ ಕೇಜ್ರಿವಾಲ್‌ರಿಗೂ ಯಾವುದೇ ಸಂಬಂಧವಿಲ್ಲ. ಎರಡು ವರ್ಷಗಳ ಹಿಂದೆ ಅರುಣ್ ಜೇಟ್ಲಿ ತನಗೆ ರಾಜ್ಯಸಭಾ ಸದಸ್ಯತ್ವವನ್ನು ನೀಡುವೆನೆಂದಿದ್ದರು. ತಾನು ಯಾರೊಂದಿಗೂ ಯಾವುದೇ ವ್ಯವಹಾರ ನಡೆಸುವುದಿಲ್ಲವೆಂದು ಅದನ್ನು ತಾನು ತಿರಸ್ಕರಿಸಿದ್ದನೆಂದು ಅವರು ಹೇಳಿದ್ದಾರೆ.