ಸ್ನೂಪ್‌ಗೇಟ್: ಪ್ರಧಾನಿ ವಿರುದ್ಧ ತನಿಖೆ ನಡೆಸಿ
ಹೊಸದಿಲ್ಲಿ, ಸೆ.8: ಗುಜರಾತ್‌ನಲ್ಲಿ ಆರ್ಕಿಟೆಕ್ಟ್ ಯುವತಿಯೋರ್ವಳನ್ನು ಹಿಂಬಾಲಿಸುವಂತೆ ಆದೇಶಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ತನಿಖೆಗೊಳಪಡಿಸುವಂತೆ ಆಮ್ ಆದ್ಮಿ ಪಾರ್ಟಿ(ಆಪ್)ಯ ಹಿರಿಯ ನಾಯಕ ಅಶುತೋಷ್ ಅವರು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗವನ್ನು ಆಗ್ರಹಿಸಿದ್ದಾರೆ.
ಅಶುತೋಷ್ ಕಳೆದ ವಾರ ಎನ್‌ಡಿಟಿವಿ ಡಾಟ್ ಕಾಮ್‌ನಲ್ಲಿ ದಿಲ್ಲಿಯ ಮಾಜಿ ಸಚಿವ ಸಂದೀಪ್ ಕುಮಾರ್ ಅವರ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಅಂಕಣವೊಂದನ್ನು ಬರೆದಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಆಯೋಗವು ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಆಯೋಗದ ಕಚೇರಿಯಲ್ಲಿ ಹಾಜರಾಗಿದ್ದ ಅಶುತೋಷ್, ಮೋದಿ ವಿರುದ್ಧ ತನಿಖೆಗೆ ಆಗ್ರಹಿಸಿ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಅವರಿಗೆ ದೂರನ್ನು ಸಲ್ಲಿಸಿದರು.
ಅವರ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಅದನ್ನು ನಮ್ಮ ದೂರು ಮತ್ತು ತನಿಖಾ ವಿಭಾಗಕ್ಕೆ ಕಳುಹಿಸಿದ್ದೇವೆ. ದೂರನ್ನು ಪರಿಶೀಲಿಸಿದ ಬಳಿಕ ಉತ್ತರಿಸಲಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಕುಮಾರಮಂಗಲಂ, ತನ್ನ ಎನ್‌ಡಿಟಿವಿ ಡಾಟ್ ಕಾಮ್ ಅಂಕಣದ ಕುರಿತು ಅವರು ನೀಡಿರುವ ವಿವರಣೆ ತೃಪ್ತಿಕರವಾಗಿಲ್ಲ ಎಂದು ಒತ್ತಿ ಹೇಳಿದರು. ಸ್ತ್ರೀದ್ವೇಷಿ ಅಭಿಪ್ರಾಯಗಳಿವೆ ಎನ್ನಲಾಗಿರುವ ತನ್ನ ಅಂಕಣದ ಕುರಿತು ತನ್ನಿಂದ ವಿವರ ಕೇಳಿರುವಂತೆ ಸ್ನೂಪ್‌ಗೇಟ್ ಎಂದೇ ಹೆಸರಾಗಿದ್ದ,ಯುವತಿಯನ್ನು ಹಿಂಬಾಲಿಸಿದ್ದ ಹಗರಣದ ಕುರಿತು ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಮತ್ತು ಗೃಹಸಚಿವರಾಗಿದ್ದ ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದಲೂ ವಿವರಣೆಯನ್ನು ಕೇಳುವುದು ಅಗತ್ಯವಾಗಿದೆ ಎಂದು ಅಶುತೋಷ್ ಹೇಳಿದರು.
‘ಸಾಹೇಬರ’ ಆದೇಶದಂತೆ ಶಾ ಅವರು ಆರ್ಕಿಟೆಕ್ಟ್ ಯುವತಿಯನ್ನು ಹಿಂಬಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದನ್ನು ಎರಡು ಸುದ್ದಿ ಜಾಲತಾಣಗಳು ಬಿಡುಗಡೆಗೊಳಿಸಿರುವ ಆಡಿಯೋ ಟೇಪ್‌ಗಳು ಬಹಿರಂಗಗೊಳಿಸಿವೆ ಎಂದು ಲೋಕಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷಗಳು ಆರೋಪಿಸಿದ್ದವು. ಬಿಜೆಪಿ ಈ ಆರೋಪವನ್ನು ನಿರಾಕರಿಸಿತ್ತು ಮತ್ತು ಯುವತಿಯ ತಂದೆ ತನ್ನ ಮಗಳ ಸುರಕ್ಷತೆಯ ಚಿಂತೆಯಿಂದಾಗಿ ಆಕೆಯ ಮೇಲೆ ನಿಗಾ ಇರಿಸಲು ತಾನೇ ಗುಜರಾತ್ ಸರಕಾರದ ನೆರವು ಕೋರಿದ್ದೆ ಎಂದು ಹೇಳಿದ್ದರು.