ನಿರಾತಂಕವಾಗಿ ಬಕ್ರೀದ್ ಹಬ್ಬ, ಬಲಿದಾನ ಆಚರಿಸಲು ಕ್ರಮ ಕೈಗೊಳ್ಳಲು ಪಿಎಫ್‌ಐ ಮನವಿ

Update: 2016-09-08 17:39 GMT

ಬಂಟ್ವಾಳ, ಸೆ. 8: ಮುಂದಿನ ವಾರ ನಡೆಯುವ ಬಕ್ರೀದ್ ಹಬ್ಬ ಹಾಗೂ ಬಲಿದಾನವನ್ನು ಮುಸ್ಲಿಮರು ನಿರ್ಭಯವಾಗಿ ಆಚರಿಸಲು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಜಿಲ್ಲಾ ಸಮಿತಿಯ ವತಿಯಿಂದ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸೆ. 12ರಂದು ಮುಸ್ಲಿಮರು ಆಚರಿಸಲಿರುವ ಬಕ್ರೀದ್ ಹಬ್ಬದೊಂದಿಗೆ ಧಾರ್ಮಿಕ ಆರಾಧನೆಯಾಗಿರುವ ಬಲಿದಾನ ಕಾರ್ಯವು ನಾಲ್ಕು ದಿವಸಗಳ ಕಾಲ ನಡೆಯಲಿದೆ. ಆದರೆ ದೇಶಾದ್ಯಂತಂತ ಗೋರಕ್ಷರ ಹೆಸರಿನಲ್ಲಿ ಕೆಲವೊಂದು ದುಷ್ಟ ಶಕ್ತಿಗಳು ಜಾನುವಾರು ಸಾಗಾಟ ಮಾಡುವವರ ಮೇಲೆ ಹಲ್ಲೆ, ಕೊಲೆ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದೇ ರೀತಿ ಬಕ್ರೀದ್ ಹಬ್ಬದ ಸಮಯದಲ್ಲಿ ಬಲಿದಾನಕ್ಕೆಂದು ಕಾನೂನು ಪ್ರಕಾರ ಜಾನುವಾರು ಸಾಗಟ ಮಾಡುವವರ ಮೇಲೆಯೂ ಗೂಂಡಾಗಿರಿ ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ನಕಲಿ ಗೋರಕ್ಷಕರನ್ನು ಮಟ್ಟ ಹಾಕಿ ಮುಸ್ಲಿಮರು ಬಕ್ರೀದ್ ಹಬ್ಬ ಹಾಗೂ ಬಲಿದಾನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಕ್ರೀದ್ ಹಬ್ಬದೊಂದಿಗೆ ನಡೆಯುವ ಬಲಿದಾನಕ್ಕೆ ಯಾವುದೇ ಅಡಚಣೆಗೆ ಅವಕಾಶ ನೀಡಬಾರದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೂಡ ಬಕ್ರೀದ್ ಹಬ್ಬ ಹಾಗೂ ಬಲಿದಾನದ ದಿನಗಳಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ಬಂಟ್ವಾಳ ಜಿಲ್ಲಾ ಅಧ್ಯಕ್ಷ ಝಕರಿಯಾ ಕಲ್ಲಡ್ಕ, ಉಪಾಧ್ಯಕ್ಷ ಸಿದ್ದೀಕ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಸಲೀಂ ಫರಂಗಿಪೇಟೆ, ಜೊತೆ ಕಾರ್ಯದರ್ಶಿ ಇಜಾಝ್ ಬಂಟ್ವಾಳ, ಜಿಲ್ಲಾ ಸಮಿತಿ ಸದಸ್ಯ ಇಸಾಕ್ ಶಾಂತಿಯಂಗಡಿ, ಇಕ್ಬಾಲ್ ಮದ್ದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News