×
Ad

‘ಹಾಫಿಝ್’ ಪುತ್ರನ ಪತ್ತೆಗೆ ತಂದೆಯ ಮನವಿ

Update: 2016-09-08 23:34 IST

ಮಂಗಳೂರು, ಸೆ. 8: ತಮಿಳುನಾಡು ಉಮ್ರಾಬಾದ್‌ನ ಖ್ಯಾತ ಧಾರ್ಮಿಕ ವಿದ್ಯಾಲಯ ದಾರುಸ್ಸಲಾಂ ಮದ್ರಸದಲ್ಲಿ ಕುರ್‌ಆನ್ ಹಿಫ್‌ಝ್ (ಕಂಠಪಾಠ) ಪೂರ್ಣಗೊಂಡು ಆಲಿಂ ವಿದ್ಯಾಭ್ಯಾಸ ಪಡೆಯುತ್ತಿದ್ದ ಬಾಲಕನೋರ್ವ ತನ್ನ ಹುಟ್ಟೂರು ಬೆಂಗಳೂರಿಗೆ ಮರಳುವಾಗ ನಾಪತ್ತೆಯಾಗಿದ್ದಾನೆ.

ಬೆಂಗಳೂರಿನ ಶಿವಾಜಿನಗರದ ನಿವಾಸಿ ಮುಹಮ್ಮದ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಸಫ್ವಾನ್ (13.5) ಎಂಬವನು ನಾಪತ್ತೆಯಾಗಿದ್ದು, ಈ ಬಗ್ಗೆ ಭಾರತೀನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಮುಹಮ್ಮದ್ ಸಲೀಂ ಅವರು ಮಗನ ಪತ್ತೆಗಾಗಿ ಮನವಿ ಮಾಡಿದ್ದಾರೆ.

ರಜೆ ನಿಮಿತ್ತ ಬೆಂಗಳೂರಿಗೆ ಮರಳಿದ್ದ ಪುತ್ರ ಸಫ್ವಾನ್‌ನನ್ನು ಆಗಸ್ಟ್ 23ರಂದು ತಾನೇ ಉಮ್ರಾಬಾದ್‌ನ ದಾರುಸ್ಸಲಾಂ ಮದ್ರಸಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸು ಬಂದಿದ್ದೇನೆ. ಆತ ಅಲ್ಲಿ ತನ್ನ ಸಹಪಾಠಿಗೆ ‘ಆರೋಗ್ಯ ಸರಿ ಇಲ್ಲ’ ಎಂದು ಹೇಳಿ ಬೆಂಗಳೂರಿಗೆ ಮರಳಿದ್ದಾನೆ. ಊರಿಗೆಂದು ಮರಳಿದವನು ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಸಫ್ವಾನ್ ಉತ್ತಮ ಗುಣ ನಡತೆಯ ಬಾಲಕನಾಗಿದ್ದು, ಕಲಿಕೆಯಲ್ಲೂ ಮುಂದಿದ್ದ. ಕಳೆದ ರಮಝಾನ್ ತಿಂಗಳಲ್ಲಿ ಕುರ್‌ಆನ್ ಕಂಠಪಾಠದಲ್ಲಿ ತರಾವೀಹ್ ನಮಾಝ್‌ನ್ನೂ ನಿರ್ವಹಿಸಿದ್ದ. ಹಾಫಿಝ್ ಪೂರ್ಣಗೊಂಡ ಸಫ್ವಾನ್‌ನಿಗೆ ಅದೇ ಮದ್ರಸದಲ್ಲಿ ಆಲಿಂ ಕೋರ್ಸ್ ಕಲಿಸುತ್ತಿದ್ದೆ. ತನ್ನ ಐವರು ಮಕ್ಕಳಲ್ಲಿ ನಾಲ್ವರಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡಿದ್ದೇನೆ. ಸಫ್ವಾನ್ ಸಹಿತ ಮೂವರು ಪುತ್ರರು ಹಾಫಿಝ್ ಪೂರ್ಣಗೊಳಿಸಿ ಆಲಿಂ ಕಲಿಯುತ್ತಿದ್ದಾರೆ. ಮತ್ತೋರ್ವ ಆಲಿಂ ಕೋರ್ಸ್ ಪೂರ್ಣಗೊಳಿಸಿದ್ದಾನೆ. ಓರ್ವ ಪುತ್ರ ಮಾತ್ರ ಧಾರ್ಮಿಕ ವಿದ್ಯಾಭ್ಯಾಸ ಪಡೆಯುವ ಪ್ರಾರಂಭದಲ್ಲೇ ಪೊಲಿಯೊ ಪೀಡಿತನಾಗಿ ಮನೆಯಲ್ಲೇ ತನ್ನೊಂದಿಗಿದ್ದಾನೆ ಎನ್ನುತ್ತಾರೆ ಸಲೀಂ.

ತನ್ನ ಮಗ ಬೆಂಗಳೂರಿಗೆ ಮರಳಿದ್ದಾನೆ ಎಂದು ಕೆಲವರು ಹೇಳುತ್ತಿದ್ದು, ಆದರೆ ಮನೆಗೆ ವಾಪಸ್ಸಾಗಿಲ್ಲ. ಈತ 4.5 ಅಡಿ ಎತ್ತರವಿದ್ದು, ಸಾಧಾರಣ ಬಿಳಿ ಮೈಬಣ್ಣ ಹೊಂದಿದ್ದಾನೆ. ಉರ್ದು, ತಮಿಳು ಮತ್ತು ಇಂಗ್ಲಿಷ್ ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಮೊಬೈಲ್ ಸಂಖ್ಯೆ 8050526029, 9743840583, 9525612374, 8867682085ಗಳನ್ನು ಸಂಪರ್ಕಿಸುವಂತೆ ಸಲೀಂ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News