ಸಲ್ಮಾನ್, ಶಾರುಖ್, ಅಕ್ಷಯ್, ಬಿಗ್ ಬಿ ರಿಂದ ಬಾಲಿವುಡ್ ಸಂಕಷ್ಟದಲ್ಲಿ !

Update: 2016-09-09 09:13 GMT

ಹೊಸದಿಲ್ಲಿ, ಸೆ.9: ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಮಿತಾಭ್ ಬಚ್ಚನ್ ಅವರಿಗೆ ನೀಡಲಾಗುವ ಅತಿಯಾದ ಸಂಭಾವನೆಯಿಂದ ಬಾಲಿವುಡ್ ಸಂಕಷ್ಟದಲ್ಲಿದೆಯೆಂದು ಹೇಳಿ ಖ್ಯಾತ ಚಿತ್ರ ನಿರ್ಮಾತೃ ಅನುರಾಗ್ ಕಶ್ಯಪ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಈ ನಟರು ನಟಿಸಿದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೋತಾ ಹೊಡೆದಾಗಲೆಲ್ಲಾ ನಿರ್ಮಾಪಕರು ಸಮಸ್ಯೆಗಳನ್ನೆದುರಿಸಲಾರಂಭಿಸುತ್ತಾರಾದರೆ ನಟರು ತಮ್ಮ ಸಂಭಾವನೆ ಪಡೆದು ಆರಾಮವಾಗಿ ಹೊರ ನಡೆಯುತ್ತಾರೆ, ಎಂದು ಕಶ್ಯಪ್ ಹೇಳಿದ್ದಾರಲ್ಲದೆ ಇದರಿಂದಾಗಿ ಅನೇಕ ಚಿತ್ರ ನಿರ್ಮಾಣ ಸಂಸ್ಥೆಗಳು ಬಾಗಿಲು ಮುಚ್ಚಿವೆ ಹಾಗೂ ಇನ್ನೂ ಹಲವಾರು ಮುಚ್ಚುವ ಹಂತಕ್ಕೆ ತಲುಪಿವೆ ಎಂದಿದ್ದಾರೆ.

ಕ್ಯಾಚ್‌ನ್ಯೂಸ್. ಕಾಂ ಜತೆ ಮಾತನಾಡಿದ ಕಶ್ಯಪ್, ‘‘ನಮ್ಮ ಬಾಲಿವುಡ್ಡಿನ ನಾಲ್ಕು ಮಂದಿ ನಟರಾದ ಶಾರುಖ್, ಅಕ್ಷಯ್, ಸಲ್ಮಾನ್ ಹಾಗೂ ಅಮಿತಾಭ್ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ, ಈ ಪಟ್ಟಿಯಲ್ಲಿನ ಇತರರು ಹಾಲಿವುಡ್ ನಟರಾಗಿದ್ದಾರೆ. ಹಾಲಿವುಡ್ ನಟರ ಚಿತ್ರಗಳು ಮಿಲಿಯಗಟ್ಟಲೆ ಹಣ ಕೊಳ್ಳೆ ಹೊಡೆದರೆ ನಮ್ಮ ನಟರ ಸಿನಿಮಾಗಳು ಹೆಚ್ಚೆಂದರೆ ಮುನ್ನೂರು ಕೋಟಿ ಆದಾಯ ಗಳಿಸಬಹುದು,’’ ಎಂದಿದ್ದಾರೆ.

‘‘ಈ ಸಮಸ್ಯೆಗೆ ನಾನು ನಟರನ್ನು ದೂಷಿಸುವುದಿಲ್ಲ, ಬದಲಾಗಿ ನಿರ್ಮಾಪಕರನ್ನು ದೂಷಿಸುತ್ತೇನೆ’’ಎಂದು ಹೇಳುವ ಕಶ್ಯಪ್ ಅವರ ಸ್ವಂತ ನಿರ್ಮಾಣದ ಚಿತ್ರ ‘ಬಾಂಬೆ ವೆಲ್ವೆಟ್’ ಕಳೆದ ವರ್ಷ ಗೋತಾ ಹೊಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದಲ್ಲಿ ಚಿತ್ರ ನಿರ್ಮಾಣ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಬೇಕೆಂದು ಹೇಳುವ ಅವರು ಚಿತ್ರ ನಿರ್ಮಾಪಕರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದೇ ಇರುವುದರಿಂದ ಅವರು ಸ್ಕ್ರಿಪ್ಟ್ ಗಳಲ್ಲಿ ಮಾಡುವ ಮಾರ್ಪಾಟುಗಳು ಹೊಸ ಪ್ರಯೋಗಗಳನ್ನು ಮಾಡಬಯಸುವ ನಿರ್ದೇಶಕರಿಗೆ ನಿರಾಶೆಯುಂಟು ಮಾಡುತ್ತದೆ, ಎಂದು ಹೇಳಿದ್ದಾರೆ.

ಇಂದು ನಮ್ಮ ಚಿತ್ರರಂಗವು ಪ್ರೇಕ್ಷಕರಿಗೆ ಏನಾದರೂ ಹೊಸತನ್ನು ನೀಡಬಯಸುವ ಉತ್ತಮ ನಿರ್ದೇಶಕರ ಕೊರತೆಯನ್ನನುಭವಿಸುತ್ತಿದೆ, ಎಂದು ಕಶ್ಯಪ್ ವಿಷಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News