ಈ ಜಾಗತಿಕ ಹೀರೋಗಳಿಗೆ ಎಷ್ಟು ಕೋಟಿ ನಗದು, ಯಾವ ಕಾರು ಸಿಗಬಹುದು ?
ಹೊಸದಿಲ್ಲಿ, ಸೆ.10: ಬ್ರೆಝಿಲ್‌ನಲ್ಲಿ ನಡೆಯುತ್ತಿರುವ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಥ್ಲೀಟ್‌ಗಳಾದ ಮರಿಯಪ್ಪನ್ ತಂಗವೇಲು ಹಾಗೂ ವರುಣ್ ಸಿಂಗ್ ಭಟ್ಟಿ ಕ್ರಮವಾಗಿ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕವನ್ನು ಜಯಿಸಿ ಮಹಾನ್ ಸಾಧನೆ ಮಾಡಿದ್ದಾರೆ. ಆದರೆ, ಈ ಜಾಗತಿಕ ಹೀರೋಗಳಿಗೆ ಇತ್ತೀಚೆಗಷ್ಟೇ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದ ಪಿ.ವಿ.ಸಿಂಧು ಹಾಗೂ ಸಾಕ್ಷಿ ಮಲಿಕ್‌ರಂತೆಯೇ ಕೋಟಿ ಕೋಟಿ ನಗದು, ಬಿಎಂಡಬ್ಲು ಕಾರುಗಳು ಬಹುಮಾನವಾಗಿ ಸಿಗಬಹುದೇ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳಲ್ಲಿ ಕಾಡುತ್ತಿದೆ.
ಆದರೆ, ಭಾರತ ಈ ತನಕ ಪ್ಯಾರಾಲಿಂಪಿಕ್ಸ್‌ನಲ್ಲಿ 8 ಪದಕ ಜಯಿಸಿದ್ದು ಪದಕ ವಿಜೇತರಿಗೆ ಕೋಟಿ ಕೋಟಿ ಬಹುಮಾನವನ್ನು ನೀಡಿಲ್ಲ. ಯಾವ ಲಕ್ಸುರಿ ಕಾರನ್ನೂ ನೀಡಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕನ್ನಡಿಗ ಎನ್.ಗಿರೀಶ್ ಬೆಳ್ಳಿ ಪದಕವನ್ನು ಜಯಿಸಿದ್ದರು. ಆದರೆ, ಅವರಿಗೆ ಸಿಗಬೇಕಾದ ಗೌರವಗಳು ಸಿಗಲಿಲ್ಲ.
ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾ, ಪೊಲೆಂಡ್ ಹಾಗೂ ಅಮೆರಿಕ ಅಥ್ಲೀಟ್‌ಗಳನ್ನು ಹಿಂದಿಕ್ಕಿ ಚಿನ್ನ ಜಯಿಸಿರುವ ತಂಗವೇಲು ಅವರಂತಹ ಸಾಧನೆ ಸಿಂಧು ಹಾಗೂ ಸಾಕ್ಷಿಗಿಂತ ಕಡಿಮೆಯೇನಲ್ಲ. ಇದೀಗ ತಂಗವೇಲು, ವರುಣ್ ಸಿಂಗ್ ಕೋಟಿ ಕ್ಲಬ್‌ಗೆ ಸೇರ್ಪಡೆಯಾಗುವರೇ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಇಬ್ಬರಿಗೆ ಬಿಎಂಡಬ್ಲ್ಲ್ಯು ಕಾರು ಸಿಗಬಹುದೇ?. ತಂಗವೇಲು, ವರುಣ್ ಸಿಂಗ್‌ಗೆ ಅವರವರ ರಾಜ್ಯ ಸರಕಾರ ನಿವೇಶನವನ್ನು ನೀಡುವುದೇ?, ಈ ಇಬ್ಬರು ಅಥ್ಲೀಟ್‌ಗಳ ರಾಜ್ಯದ ಶ್ರೀಮಂತ ವ್ಯಕ್ತಿ ಪತ್ರಿಕಾಗೋಷ್ಠಿ ನಡೆಸಿ ಬಹುಮಾನ ಪ್ರಕಟಿಸಬಹುದೇ? ಮೋದಿ-ತರೂರ್-ಸುಶ್ಮಾ-ಶೋಭಾ ಡೇ ಈ ಇಬ್ಬರ ಬಗ್ಗೆ ಟ್ವೀಟ್ ಮಾಡಬಹುದೇ? ಸಚಿವರುಗಳು ವಿಮಾನ ನಿಲ್ದಾಣಕ್ಕೆ ಧಾವಿಸಿ ಈ ಇಬ್ಬರನ್ನು ಸ್ವಾಗತಿಸುತ್ತಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
ವಿಕಲಚೇತನ ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ನಲ್ಲಿ ವಿಶ್ವದ ಅಥ್ಲೀಟ್‌ಗಳ ಎದುರು ಪದಕ ಗೆಲ್ಲಬೇಕಾದರೆ, ಕಠಿಣ ಶ್ರಮ ಹಾಗೂ ಸ್ವನಂಬಿಕೆ ಬೇಕೇ ಬೇಕು. ರಿಯೋ ಪ್ಯಾರಾಲಿಂಪಿಕ್ಸ್‌ನ 2ನೆ ದಿನವಾದ ಶುಕ್ರವಾರ ಭಾರತದ ಖಾತೆಗೆ ಎರಡು ಪದಕ ಜಮೆ ಮಾಡಿರುವ ತಂಗವೇಲು ಹಾಗೂ ಸಿಂಗ್‌ಗೆ ಕೇಂದ್ರ ಸರಕಾರ ಈಗಾಗಲೇ ಬಹುಮಾನ ಘೋಷಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಂಗವೇಲುಗೆ 2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.