ಗೌಡ ಸಮುದಾಯ ಭವನಕ್ಕೆ ರಾಜ್ಯ ಸರಕಾರದಿಂದ 50 ಲಕ್ಷ ರೂ. ಅನುದಾನ ಮಂಜೂರು
ಸುಳ್ಯ, ಸೆ.10: ಸುಳ್ಯದ ಕೊಡಿಯಾಲ್‌ಬೈಲ್‌ನಲ್ಲಿ ನಿರ್ಮಾಣವಾಗುತ್ತಿರುವ ಗೌಡ ಸಮುದಾಯ ಭವನಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಹಣ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ, ಸಚಿವರಾದ ಬಿ.ರಮಾನಾಥ ರೈ ಹಾಗೂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸುಳ್ಯದ ಗೌಡ ಸಮುದಾಯದ ನಿಯೋಗ ಜುಲೈ 20ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಸಮುದಾಯ ವನಕ್ಕೆ 2 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿತ್ತು. ಸಿದ್ಧರಾಮಯ್ಯ ಅವರು ಇದೀಗ 50 ಲಕ್ಷ ಬಿಡುಗಡೆಗೆ ಹಣಕಾಸು ಇಲಾಖೆಗೆ ಪತ್ರ ಪರೆದಿದ್ದಾರೆ. ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಹಾಗೂ ನಿಯೋಗದಲ್ಲಿದ್ದ ಸಚಿವರಾದ ಬಿ.ರಮಾನಾಥ ರೈ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಗೌಡ ಯುವ ಸೇವಾ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ಗೌಡ ಭವನ ಎಲ್ಲರ ಆಸ್ತಿಯಾಗಿದ್ದು, ಈಗಾಗಲೇ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ಇನ್ನೂ 3 ಕೋಟಿ ರೂ.ನ ಕಾಮಗಾರಿಗಳು ನಡೆಯಬೇಕಿದ್ದು, ಡಿಸೆಂಬರ್ ಒಳಗೆ ಮೊದಲ ಹಂತದ ಕಾಮಗಾರಿ ಮುಗಿದು ಮುಖ್ಯ ಸಭಾಂಗಣದ ಉದ್ಘಾಟನೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಸುಳ್ಯಕ್ಕೆ ಆಗಮಿಸಿ ನಿರ್ಮಾಣ ಹಂತದ ಕಟ್ಟಡವನ್ನು ವೀಕ್ಷಿಸಿದ್ದು, ಅನುದಾನ ಬಿಡುಗಡೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು ಎಂದು ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಹೇಳಿದರು.
ನ.5 ಹಾಗೂ 6ರಂದು ರಾಜ್ಯಮಟ್ಟದ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಗೌಡ ಸಮುದಾಯ ಭವನದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಿದ್ದೇವೆ. ಸುಮಾರು 10 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ದಿನೇಶ್ ಮಡಪ್ಪಾಡಿ ಹೇಳಿದರು.
ಗೌಡ ಯುವ ಸೇವಾ ಸಂಘದ ಮುಖಂಡರಾದ ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಸೋಮಶೇಖರ ಕೊಯಿಂಗಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.