ಮೇವಾತ್ ಸಾಮೂಹಿಕ ಅತ್ಯಾಚಾರ ಪ್ರಕರಣ; ದುಷ್ಕರ್ಮಿಗಳು ಗೋರಕ್ಷಕರು
ಚಂಡಿಗಢ,ಸೆ.10: ತಮ್ಮ ಮೇಲೆ ದಾಳಿ ನಡೆಸಿದವರು ಗೋರಕ್ಷಕರಾಗಿದ್ದರು ಎಂದು ಮೇವಾತ್ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯೋರ್ವಳು ಆರೋಪಿಸಿದ್ದಾಳೆ. ಆದರೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳು ಗೋರಕ್ಷಕ ಗುಂಪಿನ ಸದಸ್ಯರು ಎನ್ನುವುದಕ್ಕೆ ಈವರೆಗೂ ಯಾವುದೇ ಸಾಕ್ಷಾಧಾರ ದೊರಕಿಲ್ಲ ಎಂದು ಹರ್ಯಾಣಾ ಪೊಲೀಸರು ಶನಿವಾರ ತಿಳಿಸಿದ್ದಾರೆ.
ದಾಳಿಕೋರರು ನೀವು ಗೋಮಾಂಸ ತಿನ್ನುತ್ತೀರಾ ಎಂದು ನಮ್ಮನ್ನು ಪ್ರಶ್ನಿಸಿದ್ದರು. ಇಲ್ಲ ಎಂದು ನಾವು ಹೇಳಿದ್ದೆವು. ಆಗ ಅವರು ‘ನೀವು ಗೋಮಾಂಸ ತಿನ್ನುತ್ತೀರಿ,ಆದ್ದರಿಂದ ನಿಮ್ಮನ್ನು ನಾವು ಕೊಲ್ಲುತ್ತೇವೆ ’ಎಂದು ಹೇಳಿದ್ದರು. ಈ ವಿಷಯವನ್ನು ನಾವು ಪೊಲೀಸರಿಗೆ ತಿಳಿಸಿದ್ದೆವು. ಆದರೆ ಅವರು ಅದನ್ನು ಕಡೆಗಣಿಸಿದ್ದಾರೆ ಎಂದು ಸಂತ್ರಸ್ತ ಯುವತಿಯರ ಪೈಕಿ ಓರ್ವಳು ಸುದ್ದಿಗಾರರಿಗೆ ತಿಳಿಸಿದಳು.
ಆ.25ರಂದು ಮೇವಾತ್‌ನ ಗ್ರಾಮವೊಂದರಲ್ಲಿ ತೋಟದ ಮನೆಗೆ ನುಗ್ಗಿದ್ದ ಆರೋಪಿಗಳು ದಂಪತಿಯನ್ನು ಕೊಂದು ಅವರ ಇಬ್ಬರು ಪುತ್ರಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಮನೆಯಲ್ಲಿದ್ದ ನಗದು ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.
ನಮಗೆ ನ್ಯಾಯ ಬೇಕು.ಅವರು ನನ್ನ ಮಗ ಮತ್ತು ಸೊಸೆಯನ್ನು ಹತ್ಯೆಗೈದಿದ್ದಾರೆ. ನನ್ನ ಮೊಮ್ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪೊಲೀಸರ ವರ್ತನೆಯನ್ನು ನೋಡಿದರೆ ನಮಗೆ ಯಾವುದೇ ಆಸೆಯುಳಿದಿಲ್ಲ ಎಂದು ಕುಟುಂಬದ ಹಿರಿಯ ವ್ಯಕ್ತಿ ನೋವಿನಿಂದ ನುಡಿದರು.
ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳು ಗೋರಕ್ಷಕ ಗುಂಪಿಗೆ ಸೇರಿದವರು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರ ಈವರೆಗೂ ಸಿಕ್ಕಿಲ್ಲ ಎಂದು ಹೇಳಿದ ಐಜಿಪಿ ಮಮತಾ ಸಿಂಗ್ ಅವರು, ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.