×
Ad

ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿರಿಸಲು ರಾಜನ್‌ರಿಂದ ಸೂಕ್ತ ಕ್ರಮ:ರಾಷ್ಟ್ರಪತಿಗಳ ಪ್ರಶಂಸೆ

Update: 2016-09-10 18:40 IST

ಚೆನ್ನೈ,ಸೆ.10: ರಾಷ್ಟ್ರೀಕೃತ ಬ್ಯಾಂಕುಗಳ ಲೆಕ್ಕಪತ್ರಗಳಲ್ಲಿ ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳ ಪ್ರಮಾಣವನ್ನು 100 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಕಡಿಮೆಗೊಳಿಸಲು ಆರ್‌ಬಿಐ ಗವರ್ನರ್ ಹುದ್ದೆಯಿಂದ ಇತ್ತೀಚಿಗಷ್ಟೇ ನಿವೃತ್ತರಾಗಿರುವ ರಘುರಾಮ ರಾಜನ್ ಅವರು ಕೈಗೊಂಡಿದ್ದ ಕ್ರಮಗಳನ್ನು ಇಂದಿಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳಲ್ಲಿ ಏರಿಕೆ ಅಪೇಕ್ಷಣೀಯವಲ್ಲ ಎಂದು ಹೇಳಿದರು.
 
 ಕರೂರ್ ವೈಶ್ಯ ಬ್ಯಾಂಕಿನ ಶತಾಬ್ದಿ ಸಮಾರಂಭದಲ್ಲಿ ಮಾತನಾಡುತ್ತಿದ್ದ ರಾಷ್ಟ್ರಪತಿಗಳು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎನ್‌ಪಿಎ ಕುರಿತು ಹೆಚ್ಚುಹೆಚ್ಚಾಗಿ ಕೇಳುತ್ತಿದ್ದೇವೆ. ಇದು ಕಳವಳಕಾರಿ ವಿಷಯ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ರಘುರಾಮ ರಾಜನ್ ಅವರು ಬ್ಯಾಂಕಿಂಗ್ ವ್ಯವಸ್ಥೆಯು ಸೂಕ್ತ ದಿಕ್ಕಿನಲ್ಲಿ ಸಾಗುವಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು ಎಂದು ಹೇಳಿದರು. 2015,ಮಾರ್ಚ್‌ನಲ್ಲಿ ಶೇ.10.90 ರಷ್ಟಿದ್ದ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಒಟ್ಟಾರೆ ಎನ್‌ಪಿಎ ಪ್ರಮಾಣ 2016,ಮಾರ್ಚ್‌ಗೆ ಶೇ.11.40ಕ್ಕೆ ಏರಿಕೆಯಾಗಿದೆ ಎಂದ ಅವರು, ಎನ್‌ಪಿಎಗಳಿಗಾಗಿ ಕಲ್ಪಿಸಲಾಗಿರುವ ಅವಕಾಶದ ವ್ಯಾಪ್ತಿ 73,887 ಕೋ.ರೂ.ಗಳಿಂದ 1,70,630 ಕೋ.ರೂ.ಗೇರಿಕೆಯಾಗಿದೆ ಎಂದರು.
ಅಲ್ಲದೆ 2015,ಮಾರ್ಚ್‌ನಲ್ಲಿ 79,465 ಕೋ.ರೂ.ಗಳಿದ್ದ ಈ ಬ್ಯಾಂಕುಗಳ ನಿವ್ವಳ ಲಾಭ 2016,ಮಾರ್ಚ್‌ನಲ್ಲಿ 32,285 ಕೋ.ರೂ.ಗಿಳಿದಿದೆ ಎಂದು ಅವರು ತಿಳಿಸಿದರು.
 
ಎನ್‌ಪಿಎ ಪ್ರಮಾಣ ಹೆಚ್ಚುವುದು ಅಪೇಕ್ಷಣೀಯವಲ್ಲ ಎಂದ ಅವರು, ಆ ಸಂಪನ್ಮೂಲಗಳು ವಾಣಿಜ್ಯ ಸಾಲ ವಿತರಣೆಗೆ ಲಭ್ಯವಾಗಬೇಕು ಎಂದರು. ತಮ್ಮ ಕೆಟ್ಟ ಸಾಲಗಳ ನಿಜವಾದ ಸ್ಥಿತಿಯನ್ನು ಗುರುತಿಸುವಂತೆ ರಾಜನ್ ಅವರು ಬ್ಯಾಂಕುಗಳ ಮೇಲೆ ಒತ್ತಡ ಹೇರಿದ್ದರು. ಇದರಿಂದಾಗಿ ಬ್ಯಾಂಕುಗಳು ಅನುತ್ಪಾದಕ ಅಸ್ತಿಗಳಲ್ಲಿ ಏರಿಕೆಯನ್ನು ಬಹಿರಂಗಗೊಳಿಸಿದ್ದವು ಮತ್ತು ಈ ವರ್ಷ ಹೆಚ್ಚಿನ ಹಾನಿಯನ್ನು ವರದಿ ಮಾಡಿದ್ದವು.
2008ರ ವಿಶ್ವ ಆರ್ಥಿಕ ಹಿಂಜರಿತಕ್ಕೆ ವಿದೇಶದ ಖಾಸಗಿ ಬ್ಯಾಂಕೊಂದು ಕಾರಣವಾಗಿದ್ದನ್ನು ಉಲ್ಲೇಖಿಸಿದ ಮುಖರ್ಜಿ, ಭಾರತೀಯ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News