ಪ್ರಾಂಶುಪಾಲರ ಒತ್ತಡದಿಂದ ದೂರು ನೀಡಿದ್ದರು: ಕ್ಯಾಂಪಸ್ ಫ್ರಂಟ್ ಆರೋಪ
ಮಂಗಳೂರು, ಸೆ.10: ವಳಚ್ಚಿಲ್ ಪದವಿನ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಬಿ ಫಾರ್ಮಾ ವಿಭಾಗದ 4ನೆ ವರ್ಷದ ಕೆಲ ಅಮಾಯಕ ವಿದ್ಯಾರ್ಥಿಗಳ ಮೇಲೆ ವಿವಿಧ ರೀತಿಯ ಕಿರುಕುಳ ನೀಡಿದ್ದಾರೆಂದು ಬಿ ಫಾರ್ಮಾ ವಿಭಾಗದ ಪ್ರಥಮ ವರ್ಷದ 9 (4 ಮಂದಿ ವಿದ್ಯಾರ್ಥಿನಿಯರು ಹಾಗೂ 5 ಮಂದಿ ವಿದ್ಯಾರ್ಥಿಗಳು)ಮಂದಿ ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಮೂಲದ ಅಮೀನ್ ರಿನ್‌ಶಾದ್ ಎಂಬ ವಿದ್ಯಾರ್ಥಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಆದರೆ ಇಂದು ಮಧ್ಯಾಹ್ನದ ವೇಳೆ ದೂರು ನೀಡಿದ್ದ 9 ಮಂದಿಯಲ್ಲಿ 4 ಮಂದಿ ವಿದ್ಯಾರ್ಥಿನಿಯರು ದೂರನ್ನು ಹಿಂಪಡೆಯುವುದಾಗಿ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ತುಫೈಲ್, ಕಳೆದ ಹಲವಾರು ಸಮಯದಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದ್ವೇಷಪೂರ್ವಕವಾಗಿ ಪ್ರಾಂಶುಪಾಲರು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ದೂರು ನೀಡಿದ್ದರು. ಇದೀಗ ಆ ವಿದ್ಯಾರ್ಥಿನಿಯರು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದಾಗಿ ಡಿಸಿಪಿಗೆ ದೂರನ್ನು ಹಿಂಪಡೆಯಲು ಮನವಿ ನೀಡಿದ್ದಾರೆ’’ ಎಂದು ಹೇಳಿದರು.
ಕಾಲೇಜಿನಲ್ಲಿ ದಂಡ, ಶುಲ್ಕ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್‌ಗೆ ನಿರ್ಬಂಧ ಹೇರುವಂತಹ ಘಟನೆಗಳಿಗೆ ಸಂಬಂಧಿಸಿ ಸಿಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಲವಾರು ಸಮಯದಿಂದ ಪ್ರತಿಭಟಿಸುತ್ತಾ ಬಂದಿದ್ದಾರೆ. ಆ ವೈಯಕ್ತಿಕ ದ್ವೇಷದಲ್ಲೇ ಪ್ರಾಂಶುಪಾಲರು ಅಮಾಯಕ ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳಿಂದಲೇ ಒತ್ತಡ ಹೇರಿ ಪ್ರಕರಣ ದಾಖಲಿದ್ದಾರೆ. ಇಂತಹ ಘಟನೆಗಳಿಂದ ಕಾಲೇಜಿನಲ್ಲಿ ಮುಂದೊಂದು ದಿನ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಪ್ರಾಂಶುಪಾಲರೇ ಹೊಣೆಯಾಗಲಿದ್ದಾರೆ. ಅದಕ್ಕಾಗಿ ತಕ್ಷಣ ಪ್ರಾಂಶುಪಾಲರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲಾ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್, ಮುಹಮ್ಮದ್ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.