ಕಾಶ್ಮೀರ: ಹಿಂಸಾಚಾರದಲ್ಲಿ ಇಬ್ಬರ ಬಲಿ; ಸಾವಿನ ಸಂಖ್ಯೆ 75ಕ್ಕೆ
ಶ್ರೀನಗರ, ಸೆ.10: ದಕ್ಷಿಣ ಕಾಶ್ಮೀರದಲ್ಲಿ ಇಂದು ಭದ್ರತಾ ಪಡೆಗಳು ಹಾಗೂ ಪ್ರತಿಭಟನಕಾರ ನಡುವೆ ನಡೆದ ಘರ್ಷಣೆಗಳಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕಣಿವೆಯಲ್ಲಿ ಮುಂದುವರಿದಿರುವ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 75ಕ್ಕೇರಿದೆ.
ಟುಕ್ರದಲ್ಲಿ ಕಲ್ಲು ತೂರಾಟ ನಿರತ ಗುಂಪೊಂದನ್ನು ಚದುರಿಸಲು ಪೊಲೀಸರು ಸಿಡಿಸಿದ ಅಶ್ರುವಾಯು ಶೆಲ್ ತಲೆಗೆ ತಗಲಿ ಸಯಾರ್ ಅಹ್ಮದ್ ಶೇಖ್ ಎಂಬಾತ ಬಲಿಯಾದನೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರದೇಶದಲ್ಲಿ ದಂಡ ಪ್ರಕ್ರಿಯಾ ಸಂಹಿತೆಯ ಸೆ.144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಾಲ್ಕು ಅಥವಾ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ.
ಶೇಖ್‌ನನ್ನು ತಕ್ಷಣ ರಾಜ್‌ಪೊರಾದ ಉಪ ಜಿಲ್ಲಾ ಆಸ್ಪತ್ರೆಗೆ ಒಯ್ಯತಾಯಿತಾದರೂ, ಆತ ಅದಾಗಲೇ ಕೊನೆಯುಸಿರೆಳೆದಿದ್ದಾನೆಂದು ವೈದ್ಯರು ಘೋಷಿಸಿದರು.
ಅನಂತನಾಗ್ ಜಿಲ್ಲೆಯ ಬೊಟೆಂಗೂದಲ್ಲಿ ಕಲ್ಲು ತೂರಾಟ ನಿರತ ಪ್ರತಿಭಟನಕಾರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ ವೇಳೆ ಇನ್ನೊಬ್ಬ ಯುವಕ ಯಾವ್ ಭಟ್ ಎಂಬಾತ ಅಸು ನೀಗಿದ್ದಾನೆ. ಘರ್ಷಣೆಯ ವೇಲೆ ಆತನಿಗೆ ಪಾಲೆಟ್‌ನ ಗಾಯಗಳಾಗಿದ್ದವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಘಟನೆಗಳಲ್ಲಿ ಹಲವರಿಗೆ ಗಾಯಗಳಾಗಿವೆ.