×
Ad

ಕ್ರೀಡಾನೀತಿ ಜಾರಿಗೆ ಸರಕಾರದ ಚಿಂತನೆ: ಐವನ್ ಡಿಸೋಜ

Update: 2016-09-10 19:24 IST

ಮಂಗಳೂರು, ಸೆ. 10: ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಕ್ರೀಡಾ ನೀತಿ ಜಾರಿ ಮಾಡುವ ಚಿಂತನೆ ಹೊಂದಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಹೇಳಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಅವರ ಸಂಯುಕ್ತ ಆಶ್ರಯದಲ್ಲಿ ನಗರದ ಮಂಗಳ ಕ್ರೀಡಾಂಗಣದಲ್ಲಿ ಇಂದು ಏರ್ಪಡಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2016-17ನ್ನು ಉದ್ಘಾಟಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಶಾಲಾ-ಕಾಲೇಜು ಮಟ್ಟದ ಕ್ರೀಡಾಳುಗಳಿಗೆ ಕ್ರೀಡಾ ನೀತಿಯ ಮೂಲಕ ಗ್ರೇಸ್ ಮಾರ್ಕ್ಸ್ ಹಾಗೂ ಹಾಜರಾತಿ ಒದಗಿಸುವ ವ್ಯವಸ್ಥೆಯಾದಲ್ಲಿ ಶೈಕ್ಷಣಿಕವಾಗಿಯೂ ಅವರನ್ನು ಮೇಲಕ್ಕೆತ್ತುವಂತಾಗುತ್ತದೆ. ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಯತ್ತ ಗಮನ ಹರಿಸುವ ಬದಲು ಕ್ರೀಡೆಯ ಮೂಲಕವೂ ವಿದ್ಯಾರ್ಥಿಗಳು ಜೀವನ ರೂಪಿಸುವ ದಾರಿ ಕಂಡುಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿದ್ದರು. ದ.ಕ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಕ್ರೀಡಾಜ್ಯೋತಿ ಬೆಳಗಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಪುರುಷೋತ್ತಮ ಪೂಜಾರಿ, ತಾರಾನಾಥ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News