ಒಬಿಸಿ ಮೀಸಲಾತಿಯ ‘ಕೆನೆ ಪದರ’ ಆದಾಯ ಮಿತಿ ಏರಿಕೆಗೆ ಸರಕಾರ ಸನ್ನದ್ಧ

Update: 2016-09-10 14:52 GMT

ಹೊಸದಿಲ್ಲಿ, ಸೆ.11: ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ದೊರೆಯಲು ‘ಕೆನೆ ಪದರ ಆದಾಯ ಮಿತಿಯನ್ನು’ ಕೂಗಿರುವ ವಾರ್ಷಿಕ ರೂ. 6 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಿಸುವತ್ತ ಕೇಂದ್ರ ಸರಕಾರವು ಹೆಜ್ಜೆಯಿರಿಸಿದೆ.
ಪ್ರಕೃತ, ರೂ. 6 ಲಕ್ಷದವರೆಗೆ ವಾರ್ಷಿಕ ಆದಾಯವಿರುವ ಒಬಿಸಿ ಕುಟುಂಬಗಳ ಅಭ್ಯರ್ಥಿಗಳಿಗಷ್ಟೇ ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ.27 ಮೀಸಲಾತಿ ಲಭಿಸುತ್ತಿದೆ.
ಕಳೆದ ಕೆಲವು ವಾರಗಳಿಂದ ಈ ವಿಷಯದಲ್ಲಿ ಚರ್ಚೆ ನಡೆಸಿದ್ದ ಸಚಿವಾಲಯವೀಗ, ಆದಾಯ ಮಿತಿಯನ್ನು ರೂ. 8 ಲಕ್ಷಕ್ಕೆ ಹೆಚ್ಚಿಸುವ ಸಂಬಂಧದ ಕಡತವನ್ನು ಅನುಮೋದನೆಗಾಗಿ ಪ್ರಧಾನಿ ಕಚೇರಿಗೆ ಕಳುಹಿಸಿದೆ. ಅದನ್ನು ಶೀಘ್ರವೇ ಸಂಪುಟದ ಮುಂದೆ ಇರಿಸಲಾಗುವುದೆಂದು ಅಧಿಕೃತ ಮೂಲವೊಂದು ತಿಳಿಸಿದೆ.
ಸಂಪುಟವು ಈ ಪ್ರಸ್ತಾಪಕ್ಕೆ ಮಂಜೂರಾತಿ ನೀಡಿದ ಬಳಿಕ, ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರಕಾರವು ಬದಲಾವಣೆಗಾಗಿ ಮಸೂದೆಯೊಂದನ್ನು ಮಂಡಿಸಿ ಮಂಜೂರಾತಿ ಪಡೆಯಬೇಕಾಗುತ್ತದೆ.
ಒಬಿಸಿಗಳಿಗೆ ಅನ್ವಯವಾಗುವ ‘ಕೆನೆ ಪದರದ’ ವ್ಯಾಖ್ಯೆಯ ಮರು ವಿಮರ್ಷೆಯನ್ನು ಎನ್‌ಡಿಎ ಸರಕಾರ ಜುಲೈಯಲ್ಲೇ ಆರಂಭಿಸಿತ್ತು. ಚುನಾವಣೆಗೆ ಸಿದ್ಧವಾಗುತ್ತಿರುವ ಉತ್ತರ ಪ್ರದೇಶದಲ್ಲಿ ಒಬಿಸಿಗಳ ಸಂಖ್ಯೆ ಗಣನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News