×
Ad

ವಿವಿ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಅಳವಡಿಕೆ ಪ್ರಕರಣದ ಸುಳಿವು ಲಭ್ಯ: ಕಮಿಷನರ್

Update: 2016-09-10 20:23 IST

ಮಂಗಳೂರು, ಸೆ.10: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣಕ್ಕೆ ಸಂಬಂಧಿಸಿ ಕೆಲವೊಂದು ಸುಳಿವುಗಳು ಲಭ್ಯವಾಗಿದೆ. ಶೀಘ್ರದಲ್ಲೇ ಆರೋಪಿ ಬಂಧನವಾಗಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ರೆಕಾರ್ಡಿಂಗ್ ಮಾಡಲು ಬಳಸಲಾಗಿದ್ದ ಮೊಬೈಲ್ ಹಲವಾರು ಮಂದಿಯಿಂದ ಬಳಕೆ ಮಾಡಲ್ಪಟ್ಟಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ. ಹಾಗಾಗಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ವಿಳಂಬವಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಮ್ಮ ಕಚೇರಿಯಲ್ಲಿಂದು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮೊಬೈಲ್‌ನಲ್ಲಿ ರೆಕಾರ್ಡಿಂಗ್ ಆಗಿದ್ದ ಕ್ಲಿಪ್ಪಿಂಗ್‌ಗಳು ಡಿಲೀಟ್ ಆಗಿರುವ ಸಾಧ್ಯತೆಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊಬೈಲನ್ನು ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ)ಗೆ ನೀಡಿರುವುದರಿಂದ ಸಂಪೂರ್ಣ ಮಾಹಿತಿ ಇಲಾಖೆಗೆ ಲಭ್ಯವಾಗಲಿದೆ. ಸಾಕಷ್ಟು ಸುಳಿವುಗಳು ಈಗಾಗಲೇ ದೊರಕಿದೆ ಎಂದವರು ಹೇಳಿದರು.

ಕಟೀಲು ಪ್ರಕರಣ ತನಿಖೆಗೆ ಫೇಸ್‌ಬುಕ್‌ನಿಂದ ಅಸಹಕಾರ

ಕಟೀಲು ಕ್ಷೇತ್ರದ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ ಪ್ರಕರಣದ ತನಿಖೆಯ ಕುರಿತಂತೆ ಫೇಸ್‌ಬುಕ್‌ ಸಂಸ್ಥೆಯಿಂದ ಸಮರ್ಪಕ ಸಹಕಾರ ದೊರೆಯದಿರುವುದು ತನಿಖೆಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು.

ಯಾರ ಫೇಸ್‌ಬುಕ್‌ ಖಾತೆಯಲ್ಲಿ ಎಲ್ಲಿ ಈ ಬರಹ ಬರೆದು ಪೋಸ್ಟ್ ಮಾಡಲಾಗಿದೆ ಎನ್ನುವುದು ತಿಳಿದು ಬಂದರೆ ಪ್ರಕರಣದ ತನಿಖೆ ಮತ್ತು ಆರೋಪಿಯ ಪತ್ತೆ ಕಾರ್ಯ ಸುಲಭ ಸಾಧ್ಯವಾಗಲಿದೆ. ಆದರೆ ಫೇಸ್‌ಬುಕ್‌ ಈ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸುತ್ತಿಲ್ಲ. ಈ ಕುರಿತಂತೆ ಮತ್ತೊಮ್ಮೆ ಮನವಿ ಪತ್ರ (ರಿಮೈಂಡರ್) ಕಳುಹಿಸಲಾಗುವುದು. ಆಗಲೂ ಫೇಸ್‌ಬುಕ್‌  ಸಹಕಾರ ನೀಡದಿದ್ದರೆ ಸಂಸ್ಥೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಬಹುದು ಎಂದು ಆಯುಕ್ತರು ತಿಳಿಸಿದರು.

 ಕಟೀಲು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಮಂಗಳೂರು ಪೊಲೀಸ್ ಕಮಿಷನರೆಟ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಜಂಟಿಯಾಗಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ನಡೆಸಲಾಗುತ್ತಿದೆ. ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದ ಈ ಪ್ರಕರಣ ಕುರಿತಂತೆ ಈಗಾಗಲೇ ಚಿಕ್ಕಮಗಳೂರಿನ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆತನಿಂದ ಕೆಲವು ಮಾಹಿತಿಗಳು ಲಭ್ಯವಾಗಿವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News