×
Ad

ಸೆ.15ರಂದು ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್‌ರಿಗೆ ಪೌರಸನ್ಮಾನ: ಐವನ್ ಡಿಸೋಜ

Update: 2016-09-10 20:30 IST

ಮಂಗಳೂರು,ಸೆ.10: ರಾಜ್ಯ ಸರಕಾರದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್ ಅವರಿಗೆ ಸೆ. 15ರಂದು ಪೌರ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಪರಾಹ್ನ 3:30ಕ್ಕೆ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ಪೌರಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ದ.ಕ ಜಿಲ್ಲಾ ಖಾಝಿಗಳಾದ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್, ಅಸೈಯದ್ ಫಝಲ್ ಕೋಯಮ್ಮ ತಂಙಳ್, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಂಗಳೂರಿನ ಧರ್ಮಪಾಲನಾಥ ಸ್ವಾಮೀಜಿ, ಮಂಗಳೂರು ಪ್ರಾಂತ್ಯದ ಧರ್ಮಗುರು ಡೆನಿಸ್ ಮೊರಾಸ್ ಪ್ರಭು ಅವರ ಉಪಸ್ಥಿತಿಯಲ್ಲಿ ಪೌರ ಸನ್ಮಾನ ಮಾಡಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್.ರಮೇಶ್ ಕುಮಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಶುಭ ಹಾರೈಕೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಬಿ.ಎ.ಮೊಹಿದಿನ್ ಅವರ ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ಪ್ರದರ್ಶನ ಮಾಡಲಾಗುವುದು. ಅಪರಾಹ್ನ 3:30ರಿಂದ ಎಡಪದವು ಐಡಿಯಲ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ವಿಚಾರದಲ್ಲಿ ಚರ್ಚೆ ನಡೆಸುವಂತೆ ಪ್ರಸ್ತಾವವನ್ನು ನಾನು ಹಾಕಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಮುಗಿಸುವಂತೆ ಆಗ್ರಹಪಡಿಸಿದ್ದಾರೆ. ಎತ್ತಿನ ಹೊಳೆ ವಿಚಾರದಲ್ಲಿ ಸದನದಲ್ಲಿ ಚರ್ಚೆಗೆ ಯಾವುದೇ ಸಹಕಾರ ನನಗೆ ನೀಡಿಲ್ಲ ಎಂದು ಹೇಳಿದರು.

ಕಟೀಲು ದೇವಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದ ಅವರು ರೋಪಿಗಳು ವಿದೇಶದಲ್ಲಿದ್ದು ಕುಕೃತ್ಯವೆಸಗಿದ್ದರೆ ತನಿಖೆಗೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಎಂ.ಹರಿನಾಥ್, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಪೌರ ಸನ್ಮಾನ ಸ್ವಾಗತ ಸಮಿತಿಯ ಕಾರ್ಯಕ್ರಮ ಸಂಚಾಲಕ ಲಾರೆನ್ಸ್ ಡಿಸೋಜ, ದ.ಕ ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು, ಶಂಸುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News