ಬಿ.ಸಿ.ರೋಡ್: ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಬೆಂಕಿ !
ಬಂಟ್ವಾಳ, ಸೆ. 10: ಬಿ.ಸಿ.ರೋಡ್ ಕಾಮಾಜೆ ಸರಕಾರಿ ಪದವಿ ಕಾಲೇಜಿನ ಮೇಲಂತಸ್ತಿನಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಬೆಂಕಿ ಹೊತ್ತಿ ಉರಿದು ಬೆಂಕಿಯ ಕಪ್ಪುಹೊಗೆ ಪರಿಸರದಲ್ಲಿ ವ್ಯಾಪಿಸುತ್ತಿದ್ದಂತೆ ಭಯಭೀತರಾದ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಘಟನೆಯಿಂದ ಬ್ಯಾಗ್, ಪುಸ್ತಕ ಹಿಡಿದುಕೊಂಡು ತರಗತಿಯಿಂದ ಹೊರ ಓಡಲಾರಂಬಿಸಿದರು.
ದಟ್ಟ ಕಪ್ಪು ಹೊಗೆ ಆವರಿಸಿದನ್ನು ಕಂಡು ಊರಿನ ಜನರು ಕೂಡಾ ಕಾಲೇಜು ಕಡೆಗೆ ಓಡಿ ಬಂದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಅಗ್ನಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾಲೇಜಿನ ಮೇಲ್ಮಹಡಿಯಲ್ಲಿ ಬೆಂಕಿ ಉರಿಯಲಾರಂಭಿಸಿತ್ತು. ಬೆಂಕಿ... ಬೆಂಕಿ... ಎಂದು ಬೊಬ್ಬೆ ಕೇಳುತ್ತಿದ್ದಂತೆಯೇ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ಕೆಲ ಉಪನ್ಯಾಸಕರು ಏನು ನಡೆಯುತ್ತಿದೆ ಎಂದು ಅರಿಯದೆ ಮೂಕ ವಿಸ್ಮಿತರಾಗಿದ್ದರು.
ಅಗ್ನಿಶಾಮಕದಳದ ವಾಹನ ಧ್ವನಿ ಮೊಳಗಿಸಿಕೊಂಡು ಕಾಲೇಜಿನತ್ತ ಧಾವಿಸಿಸುತ್ತಿರುವುದನ್ನು ಕಂಡು ಊರಿನ ಮಂದಿಯೂ ಗಾಬರಿಗೊಳಗಾಗಿ ಕಾಲೇಜಿನತ್ತ ಬರಲಾರಂಭಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಚರಣೆ ಆರಂಭಿಸಿ, ಮಹಡಿಗೆ ಏಣಿ ಜೋಡಿಸಿ ನೀರು ಹಾಯಿಸಿ ಬೆಂಕಿ ನಂದಿಸಿದರು. ಇದೆಲ್ಲವೂ ಅಣುಕು ಕಾರ್ಯಾಚರಣೆ ಎಂದು ಗೊತ್ತಾದ ಬಳಿಕ ಆತಂಕಗೊಂಡಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ಜನರು ನಿಟ್ಟುಸಿರು ಬಿಟ್ಟರು.
ಬಂಟ್ವಾಳದ ಜೆಸಿಐ ಸಂಸ್ಥೆ ಜೆಸಿ ಸಪ್ತಾಹದ ಅಂಗವಾಗಿ ಸುರಕ್ಷಾ ದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಿತ್ತು. ಬಂಟ್ವಾಳ ಅಗ್ನಿಶಾಮಕದಳ, ಸರಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಳೆ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಲಾಯಿತು. ಅಣಕು ಕಾರ್ಯಚರಣೆಯ ಮೂಲಕ ಅಗ್ನಿ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಲಾಯಿತು.
ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
ರಾಷ್ಟ್ರಪ್ರಶಸ್ತಿ ವಿಜೇತ ಅಗ್ನಿಶಾಮಕದ ದಳದ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಅಣಕು ಕಾರ್ಯಚರಣೆಯ ಬಳಿಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಗ್ನಿ ಆಕಸ್ಮಿಕಗಳು ನಡೆದ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಮನೆಯಲ್ಲಿ ಬೆಂಕಿ ಅವಘಡಗಳು ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ನಿವಾರಿಸಿದರು.
ಬಳಿಕ ಬೆಂಕಿ ಅವಘಡ ನಡೆದಾಗ ಅಗ್ನಿಶಾಮಕದಳದ ಸಿಬ್ಬಂದಿ ಯಾವ ರೀತಿ ಕಾರ್ಯಚರಣೆ ಮಾಡುತ್ತಾರೆ ಎನ್ನುವ ಬಗ್ಗೆ ಕಾಲೇಜು ಆವರಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು.
ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಬಿ.ಶೇಖರ್, ಬಂಟ್ವಾಳ ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್, ಪ್ರಮುಖ ಅಗ್ನಿಶಾಮಕ ಜಯ, ಚಾಲಕ ಕಿರಣ್‌ಕುಮಾರ್ ಅಗ್ನಿಶಾಮಕರಾದ ಲೋಹಿತ್, ಪ್ರಸಾದ್, ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜೆಸಿಐ ಅಧ್ಯಕ್ಷ ಸಂತೋಷ್ ಜೈನ್, ಕಾರ್ಯದರ್ಶಿ ಡಾ.ಬಾಲಕೃಷ್ಣ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ಕೀರ್ತಿರಾಜ್, ಕಿಶೋರ್ ಕುಲಾಲ್, ಸದಸ್ಯರಾದ ಸದಾನಂದ ಬಂಗೇರ, ಯತೀಶ್ ಕರ್ಕೆರಾ, ಕಾಲೇಜಿನ ಎನ್ನೆಸ್ಸೆಸ್ ಘಟಕಾಧಿಕಾರಿ ಹೈದರ್ ಅಲಿ ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಸ್ವಾಗತಿಸಿದರು, ಜೆಸಿ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ವಂದಿಸಿದರು.