ಆಸ್ಟ್ರೇಲಿಯದ ಮೆಲ್ಬೊರ್ನ್‌ನಲ್ಲಿ ಮಿಂಚಿದ ಮಂಗಳೂರಿನ ನೃತ್ಯ ಪ್ರತಿಭೆ
ಮಂಗಳೂರು, ಸೆ.10: ಆಸ್ಟ್ರೇಲಿಯದ ಜನಪ್ರಿಯ ಐಎಫ್‌ಎಫ್‌ಎಮ್ 2016 ಟೆಲ್‌ಸ್ಟ್ರಾ ಬಾಲಿವುಡ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರಿನ ಪ್ರತಿಭೆ ಸೈರಸ್ ವಾಂಗ್ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಂಗ್ ತನ್ನ 3ರ ಹರೆಯದಿಂದಲೇ ಮಂಗಳೂರಿನ ಬೆಂದೂರ್‌ವೆಲ್ ಕುನಿಲ್ ಕಾಂಪ್ಲೆಕ್ಸ್‌ನಲ್ಲಿರುವ ಎಕ್ಸಲೆಂಟ್ ಡ್ಯಾನ್ಸ್ ಅಕಾಡೆಮಿಯ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಆರಂಭಿಸಿದ್ದರು. ವಾಂಗ್‌ನಲ್ಲಿರುವ ಪ್ರತಿಭೆಯನ್ನು ಗುರುತಿಸಿದ ತಾಯಿ ರೋಸಿ ವಾಂಗ್ ಹಾಗೂ ನೃತ್ಯ ಗುರು ಸಂದೇಶ ಜಾನ್ವಿ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೊತ್ಸಾಹಿಸಿದ್ದರು. ಸೋನಿ ಟಿವಿಯ ಬೂಗಿವೂಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿ ಹೊರಹೊಮ್ಮಿದರು. ಬಳಿಕ ‘ಕಲರ್ಸ್ ಚಕ್ ಧೂಮ್‌ಧೂಮ್’ನಲ್ಲಿ ಭಾಗವಹಿಸಿ ಟಾಪ್ 5 ಸ್ಥಾನ ಗಳಿಸಿದ್ದರು.
ಮಂಗಳೂರಿನ ಸಂತ ತೆರೇಸಾಸ್ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ಆಸ್ಟ್ರೆಲಿಯದ ಮೆಲ್ಬೋರ್ನ್‌ಗೆ ತೆರಳಿದ್ದ ವಾಂಗ್, ಬಾಲಿವುಡ್ ಖ್ಯಾತನಾಮರಾದ ಮಲೈಕಾ ಅರೋರಾ ಹಾಗೂ ರಿಚಾ ಚಡ್ಡಾ ತೀರ್ಪುಗಾರರಾಗಿರುವ ಐಎಫ್‌ಎಫ್‌ಎಮ್ 2016 ಟೆಲ್‌ಸ್ಟ್ರಾ ಬಾಲಿವುಡ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.