ಜಮೀಯ್ಯತುಲ್ ಫಲಾಹ್‌ನಿಂದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಎ. ಮೊಹಿದಿನ್‌ರಿಗೆ ಅಭಿನಂದನಾ ಸಮಾರಂಭ
ಮಂಗಳೂರು, ಸೆ. 10: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುಸ್ಲಿಂ ಸಮುದಾಯದ ಅಭಿವೃದ್ದಿಗೆ ಶಿಕ್ಷಣ ಅಗತ್ಯವೆಂಬುದನ್ನು ಅರಿತುಕೊಂಡು ಅದನ್ನು ಕಾರ್ಯರೂಪಕ್ಕೆ ತಂದ ಮಹಾನ್ ವ್ಯಕ್ತಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಅವರು, ಇಂದು ನಗರದ ಕಂಕನಾಡಿಯ ಜಮಿಯ್ಯತುಲ್ ಫಲಾಹ್ ಸಮುದಾಯ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಅಂಗವಾಗಿ ರಾಜ್ಯ ಸರಕಾರದಿಂದ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿ ಪಡೆದ ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದೀನ್ ಅವರಿಗೆ ದ.ಕ, ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ವತಿಯಿಂದ ಇಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನೇರ ನಡೆ ನುಡಿಯ ವ್ಯಕ್ತಿತ್ವವಿರುವ ಬಿ.ಎ. ಮೊಹಿದಿನ್ ಅವರು ಯಾವುದೇ ವಿಚಾರದಲ್ಲಿಯೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರ ಚಿಂತನೆಗಳ ಫಲವಾಗಿ ಇಂದು ಸರಕಾರದಿಂದ ಸಮುದಾಯಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಗಳು ಜಾರಿಗೊಂಡಿದೆ ಎಂದರು.
ದೇವರಾಜ ಅರಸು ಅವರ ಚಿಂತನೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ರಾಜ್ಯಾದ್ಯಂತ ಆ ಚಿಂತನೆಗಳ ಜಾರಿಯಲ್ಲಿ ಬಿ.ಎ. ಮೊಹಿದಿನ್ ಅವರ ಶ್ರಮ ಶ್ಲಾಘನೀಯ. ಸಮಾಜದ ಹಿಂದುಳಿದವರ ಅಭಿವೃದ್ದಿಯ ನೆಲೆಯಲ್ಲಿ ಅವರ ಕಾರ್ಯ ಉಲ್ಲೇಖನೀಯ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ನಿರಂತರ ಅಭಿವೃದ್ದಿಗಾಗಿ ಬಿ.ಎ.ಮೊಹಿದಿನ್ ಹಗಲಿರುಳು ದುಡಿದಿದ್ದಾರೆ ಎಂದು ಅವರು ಹೇಳಿದರು.
ಅವರು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವ ನಾಯಕರಲ್ಲ. ಅವರು ಸರ್ವ ಸಮಾಜದ ಕುರಿತು ಪ್ರೀತಿ ಹಾಗೂ ಒಡನಾಟ ಬೆಳೆಸಿಕೊಂಡವರು. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಅವರು ನಿರಂತರ ಹೋರಾಟ ನಡೆಸಿದ್ದಾರೆ ಎಂದವರು ಹೇಳಿದರು.
ಇದೇ ವೇಳೆ ಐಎಲ್‌ಎಮ್ ಪ್ರಶಸ್ತಿ ಪುರಸ್ಕೃತ ಮನ್ಸೂರ್ ಅಹ್ಮದ್(ಆಜಾದ್) ಅವರನ್ನು ಸಮ್ಮಾನಿಸಲಾಯಿತು. ಜಮೀಯ್ಯತುಲ್ ಮಂಗಳೂರು ನಗರ ಘಟಕದ ವತಿಯಿಂದ 53 ವಿದ್ಯಾರ್ಥಿಗಳಿಗೆ ಒಟ್ಟು ಸುಮಾರು 3 ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಎ. ಮೊಹಿದಿನ್ ಅವರು, ಮುಂದೆ ದೇಶವನ್ನು ಕಟ್ಟಬೇಕಾದ ಯುವಜನರು ದೇಶದಲ್ಲಿ ಐಕ್ಯತೆ ಕಾಪಾಡುತ್ತಾ ಒಂದಾಗಿ ಬಾಳಬೇಕು ಎಂದು ಹೇಳಿದರು. ಅರಸು ಅವರು ಅಧಿಕಾರದಲ್ಲಿ ಉಳಿದಿದ್ದರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯ ಇನ್ನಷ್ಟು ಅಭಿವೃದ್ದಿಯಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಅದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಹಾಜಿ ವೈ.ಅಬ್ದುಲ್ಲಾ ಕುಂಞ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಮುಖ್ಯ ಅತಿಥಿಯಾಗಿದ್ದರು. ದ.ಕ ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು. ಬಿ.ಎ.ಮುಹಮ್ಮದ್ ಅಲಿ ಸಮ್ಮಾನಿತರ ಪರವಾಗಿ ಮಾತನಾಡಿದರು.
ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬ್ಯಾರಿಸ್ ವೆಲ್ಫೇರ್ ಫೋರಂ ಅಬುಧಾಬಿಯ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಜಮೀಯತುಲ್ ಫಲಾಹ್ ನಗರ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್, ಜಮೀಯತುಲ್ ಫಲಾಹ್ ಕಾರ್ಯದರ್ಶಿ ಸೈಯದ್ ಝುಬೈರ್ ಶಾ, ಕೋಶಾಧಿಕಾರಿ ಝಮೀರ್ ಅಂಬರ್ ಸಿ.ಎ., ಜೊತೆ ಕಾರ್ಯದರ್ಶಿ ಎಂ.ಎಚ್. ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.
ಹನೀ ಮಾಸ್ಟರ್ ಸಮ್ಮಾನ ಪತ್ರ ವಾಚಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.