ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಸಮಿತಿಯ ಸಭೆ
ಮಂಗಳೂರು, ಸೆ.11: ಸರಕಾರಿ ಮತ್ತು ಅನುದಾನಿತ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟವನ್ನು ನಡೆಸದಿದ್ದರೆ ಶಿಕ್ಷಕರು ಕೆಲಸವನ್ನು ಕಳೆದುಕೊಂಡು ಮನೆಯಲ್ಲಿ ಕೂರಬೇಕಾದ ಪರಿಸ್ಥಿತಿ ಬರಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಕೆ. ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಅವರು ನಗರದ ಬಲ್ಮಠದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ ಜಿಲ್ಲಾ ಸಮಿತಿಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಲವಾರು ಶಾಲೆಗಳಲ್ಲಿ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಸರಕಾರ ನಡೆಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಎದುರಾಗಲಿದೆ. ಸರಕಾರವು ಆರ್‌ಟಿಇಗೆ ವ್ಯಯಿಸುವ ಅನುದಾನದಿಂದ ಖಾಸಗಿ ಸಂಸ್ಥೆಗಳಿಗೆ ಲಾಭವಾಗುತ್ತಿದ್ದು ಇದನ್ನು ಸರಕಾರಿ ಶಾಲೆಗೆ ಬಳಸಿದರೆ ಸರಕಾರಿ ಶಾಲೆಯ ಅಭಿವೃದ್ಧಿಯಾಗಲಿದೆ. ಸರಕಾರಿ ಮತ್ತು ಅನುದಾನಿತ ಶಿಕ್ಷಕರ ಶಿಕ್ಷಣವು ಕಳಪೆ ಎಂದು ಬಿಂಬಿಸಲಾಗುತ್ತಿದ್ದು ಸರಿಯಾದ ವ್ಯವಸ್ಥೆ ನೀಡಿದರೆ ಶಿಕ್ಷಣದ ಗುಣಮಟ್ಟವು ಹೆಚ್ಚಾಗಲಿದೆ ಎಂಬುದನ್ನು ಸರಕಾರ ತಿಳಿಯಬೇಕು ಎಂದು ಹೇಳಿದರು.
ಇಸಿಒ, ಬಿಆರ್‌ಪಿ, ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿ ಹಲವು ಸಮಸ್ಯೆಗಳಿದ್ದು ಇದಕ್ಕೆ ಸಂಘಟಿತ ಹೋರಾಟ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಶಿಕ್ಷಣ ಸಚಿವರ ಪ್ರಧಾನ ಕಾರ್ಯದರ್ಶಿ ಶಿಕ್ಷಕರಿಗೆ ಸವಲತ್ತುಗಳನ್ನು ನೀಡಲು ಹಿಂಜರಿಯುತ್ತಿದ್ದು, ಶಿಕ್ಷಣ ಸಚಿವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಶಿಕ್ಷಕರಿಗೆ ಸವಲತ್ತುಗಳನ್ನು ನೀಡದೆ ಸರಕಾರದ ದುಡ್ಡು ಉಳಿಸುವ ಪ್ರಯತ್ನ ಮಾಡಿ ಶಿಕ್ಷಣ ಸಚಿವರಿಗೆ ಶಹಭಾಷ್‌ಗಿರಿ ಸಿಗಲು ಪ್ರಯತ್ನ ಮಾಡುತ್ತಿದ್ದಾರೆ. ಕುಮಾರ್ ನಾಯಕ್ ವರದಿ ಜಾರಿಗೆ ತರಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ಟಾನ್ಲಿ ತಾವ್ರೋ ವಹಿಸಿದ್ದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಣಿತ ವಿಷಯ ಪರಿವೀಕ್ಷಣಾಧಿಕಾರಿ ರಾಧಾಕೃಷ್ಣ ಭಟ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಭಟ್, ಐಟಿಐ ಕದ್ರಿಯ ಉಪನ್ಯಾಸಕ ರಾಧಾಕೃಷ್ಣ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಡಿಕೇರಿ ಜಿಲ್ಲಾ ಕಾರ್ಯದರ್ಶಿ ಕುಮಾರ್ ಉಪಸ್ಥಿತರಿದ್ದರು.
ಮಾರ್ಕ್ ಮೆಂಡೋನ್ಸ್ ಸ್ವಾಗತಿಸಿದರು. ಉದಯಶಂಕರ್ ವಂದಿಸಿದರು. ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.