ಮನೋವಿಶ್ಲೇಷಕ, ಕಥೆಗಾರ ಗಂಗಾಧರ್ ಬೆಳ್ಳಾರೆ ನಿಧನ

Update: 2016-09-11 11:39 GMT

ಪುತ್ತೂರು, ಸೆ.11: ಮನೋವಿಶ್ಲೇಷಕ, ಕಥೆಗಾರ, ಯಕ್ಷಗಾನ ವಿಮರ್ಶಕ, ತಾಳಮದ್ದಳೆ ಅರ್ಥಧಾರಿ, ನಾಟಕ ಹಾಗೂ ಸಿನಿಮಾ ಕಲಾವಿದ, ತರಬೇತುದಾರ ಹೀಗೆ ಹಲವು ಆಯಾಮಗಳಲ್ಲಿ ಗುರುತಿಸಿಕೊಂಡಿದ್ದ ಪುತ್ತೂರಿನ ಸಾಲ್ಮರ ನಿವಾಸಿ ಗಂಗಾಧರ ಬೆಳ್ಳಾರೆ (51) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತ: ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿದ್ದ ಅವರು ಕಳೆದ ಹಲವು ವರ್ಷಗಳಿಂದ ಪುತ್ತೂರಿನಲ್ಲಿ ವಾಸವಾಗಿದ್ದು, ಸ್ಕೋಪ್ ಕೌನ್ಸಿಲಿಂಗ್ ಸೆಂಟರ್ ನಡೆಸಿಕೊಂಡು ಜನರಿಗೆ ಸೇವೆ ನೀಡುತ್ತಿದ್ದರು. ಕೌನ್ಸಿಲಿಂಗ್ ಫಿಸಿಯೋಥೆರಪಿಯಲ್ಲಿ ಎಂ.ಎಸ್. ಪದವಿ ಪಡೆದಿದ್ದ ಗಂಗಾಧರ್ ಬೆಳ್ಳಾರೆ ಅವರು ಸೈಕೋಥೆರಪಿ, ಗ್ರೂಪ್ ಕೌನ್ಸಿಲಿಂಗ್, ಇನ್ನಿತರ ತರಬೇತಿಗಳನ್ನು ನಡೆಸುತ್ತಿದ್ದರು.

ಚಿಲಿಪಿಲಿ, ತಪ್ಪು ತಿದ್ದುವ ತಪ್ಪು, ಕೌನ್ಸಿಲಿಂಗ್ ಕಥೆಗಳು, ತಬ್ಬಲಿಯು ನೀನಲ್ಲ ಮಗಳೆ ಇವರ ಪ್ರಕಟಿತ ಪುಸ್ತಕಗಳು. ಅಲ್ಲದೆ ಕಲಿಕೆ ಹಾದಿಯ ಮಗು, ಮಕ್ಕಳ ಮನೋವಿಕಾಸ ಕೈಪಿಡಿ, ಕನಸು ಹೆಕ್ಕುವ ಮನಸು, ವರ್ತನಾ ವಿಮರ್ಶೆಯ ನೈಜ ಕಥಾಗುಚ್ಚ, ನೆನಪಿಸಿಕೊಂಡು ಕೌನ್ಸಿಲಿಂಗ್, ವಾಸ್ತವ ಕಥೆಗಳು, ಇವರು ನೀವಲ್ಲ' ಇತ್ಯಾದಿ ಕೃತಿಗಳು ಮುದ್ರಿತಗೊಂಡಿದೆ. ಈ ಪೈಕಿ 'ತಬ್ಬಲಿಯು ನೀನಲ್ಲ ಮಗಳೆ' ಅತೀಹೆಚ್ಚು ಮರು ಮುದ್ರಣಗೊಂಡಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಹಲವಾರು ಅಧ್ಯಯನ ಬರಹಗಳು ಪ್ರಕಟಗೊಂಡಿದೆ.

‘ಕನಸು ಕಣ್ಣು ತೆರೆದಾಗ’ ಎಂಬ ಮಕ್ಕಳ ಚಲನಚಿತ್ರದಲ್ಲಿ ಪ್ರೊಪೆಸರ್ ಆಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮೃತರು ಪತ್ನಿ ಪ್ರಾಥಮಿಕ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News