ಸೌಹಾರ್ದವಿದ್ದಲ್ಲಿ ದೇವರ ಅನುಗ್ರಹ: ವಿನಯಕುಮಾರ್ ಸೊರಕೆ

Update: 2016-09-11 12:37 GMT

ಪುತ್ತೂರು, ಸೆ.11: ಎಲ್ಲಾ ಧರ್ಮಗಳೂ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ಆಶಯವನ್ನು ಹೊಂದಿದ್ದು, ಧಾರ್ಮಿಕ ಆಚರಣೆಯಲ್ಲಿ ಭಾರತೀಯರಾದ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಅವರು ರವಿವಾರ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ವತಿಯಿಂದ ಏಳು ದಿನಗಳ ಕಾಲ ನಡೆದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯೆಯ ಪ್ರತೀಕ ಎನಿಸಿದ ಗಣೇಶೋತ್ಸವ ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿರದೆ ಇಡೀ ವಿಶ್ವದಲ್ಲೇ ಸಂಭ್ರಮದಿಂದ ಆಚರಿಸುವಂತಾಗಿದೆ. ಕೇವಲ ಮನುಷ್ಯ ಮಾತ್ರವಲ್ಲದೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವರಾಶಿಗಳು ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿವೆ ಎಂದರು.

ಬನ್ನೂರು ಚರ್ಚ್‌ನ ಧರ್ಮಗುರು ರೆ.ಫಾ.ನಿಕೋಲಸ್ ಡಿಸೋಜ ಮಾತನಾಡಿ, ಪ್ರತಿಯೊಂದು ಧರ್ಮದವರು ಸೇರಿ ನಡೆಸುವ ಕಾರ್ಯಕ್ರಮ ಐಕ್ಯತೆಯನ್ನು ಸೂಚಿಸುತ್ತದೆ. ಇಂತಹಾ ಐಕ್ಯತೆಯಿಂದ ಜೀವಿಸಿದರೆ ಶತ್ರುಗಳನ್ನು ಜಯಿಸಲು ಸಾಧ್ಯ. ಈ ನಿಟ್ಟಿನಲ್ಲಿ ಹೃದಯವನ್ನು ಜಯಿಸಿ ಮಾನವನಾಗಿ ಐಕ್ಯತೆಯಿಂದ ಬದುಕೋಣ. ಧಾರ್ಮಿಕ ಕಾರ್ಯಕ್ರಮಗಳು ಇಂತಹಾ ಐಕ್ಯತೆಯನ್ನು ಮಾನವನಲ್ಲಿ ಬಿತ್ತಲು ಕಾರಣವಾಗುತ್ತದೆ ಎಂದರು.

ಕುಂಬ್ರ ಕೆಐಸಿಯ ಪ್ರಾಂಶುಪಾಲ ಅನೀಷ್ ಕೌಶರಿ ಮಾತನಾಡಿ, ವಿವಿಧ ಧರ್ಮದವರು ಪರಸ್ಪರ ಸೌಹಾರ್ದತೆಯಿಂದ ಬಾಳಲು ಮೊದಲು ಮಾನವನನ್ನು ಗೌರವಿಸಬೇಕು. ಸೌಹಾರ್ದ, ಒಳ್ಳೆಯ ಸಂದೇಶವನ್ನು ನೀಡುವ ಮೂಲಕ ಧರ್ಮದ ಮುಖಂಡರು, ರಾಜಕೀಯ ಮುಖಂಡರು ಸಹೋದರತೆಯನ್ನು ಮರೆಯಬೇಕು. ಅದನ್ನು ಬಿಟ್ಟು ಅಕ್ರಮದೆಡೆಗೆ ಪ್ರೋತ್ಸಾಹಿಸುವುದು ಸರಿಯಲ್ಲ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸೌಹಾರ್ದ ವಾತಾವರಣದ ಜತೆಗೆ ಆಯಾಯ ಧರ್ಮದವರು ಧರ್ಮದ ಚೌಕಟ್ಟಿನೊಳಗೆ ಕಾರ್ಯಾಚರಿಸುತ್ತಾ ಇತರ ಧರ್ಮವನ್ನು ಪ್ರೀತಿಸುವಂತಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ, ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಉಗ್ರ ಹೋರಾಟಗಾರರು, ಸೌಮ್ಯವಾದಿಗಳು ಎಲ್ಲರೂ ಒಂದಾಗಬೇಕು ಎನ್ನುವ ನಿಟ್ಟಿನಲ್ಲಿ ಅರ್ಥಪೂರ್ಣ ಪ್ರಯತ್ನದ ಆಚರಣೆ ಆರಂಭಿಸಿದವರು ತಿಲಕರು. ಸಾಮರಸ್ಯದ ಗಣೇಶೋತ್ಸವದ ಜತೆಗೆ ಮಾನವೀಯತೆ, ಸೌಹಾರ್ದತೆಯನ್ನು ಹಿರಿಯರು ಮಕ್ಕಳಿಗೆ ಪ್ರಮುಖವಾಗಿ ಕಲಿಸಬೇಕು ಎಂದು ಹೇಳಿದ ಅವರು ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿಯವರ ನೇತೃತ್ವದಲ್ಲೇ 75ನೆ ವರ್ಷದ ಗಣೇಶೋತ್ಸವವೂ ನಡೆಯಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ನಗರಸಬೆ ಪೌರಾಯುಕ್ತೆ ರೂಪಾ ಶೆಟ್ಟಿ, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಉದ್ಯಮಿ, ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಪಾಲ್ಗೊಂಡು ಶುಭ ಹಾರೈಸಿದರು. ಅಂಬಿಕಾ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಸುರೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಸ್ವಾಗತಿಸಿದರು. ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News