ಗೇರುಕಟ್ಟೆ: ಕಾರು-ರಿಕ್ಷಾ ಢಿಕ್ಕಿ; ಮಹಿಳೆ ಮೃತ್ಯು
ಬೆಳ್ತಂಗಡಿ, ಸೆ.11: ಗೇರುಕಟ್ಟೆ ಸಮೀಪದ ಕೆಮ್ಮಟ್ಟೆಮಾರು ಎಂಬಲ್ಲಿ ರವಿವಾರ ಅಪರಾಹ್ನ ಮಾರುತಿ ಕಾರು ಮತ್ತು ಆಟೊರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಮೃತಪಟ್ಟ ಮಹಿಳೆಯನ್ನು ಗೇರುಕಟ್ಟೆ ಕೊರಂಜ ಬಳಿಯ ನಿವಾಸಿ ವೀಣಾ (35) ಎಂದು ಗುರುತಿಸಲಾಗಿದೆ. ಇವರ ಪತಿ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವೀಣಾ ಅವರ ಪತಿ ಕೋಮಲಾಕ್ಷ (45), ಮಕ್ಕಳಾದ ಗಾಯತ್ರಿ(12), ರಕ್ಷಿತ್ (8) ಹಾಗೂ ಗೇರುಕಟ್ಟೆಯ ಪುನ್ಕೆದಡಿ ನಿವಾಸಿ ದೇವಕಿ (23) ಅವರ ಪುತ್ರ ಅಕ್ಷಯ್ (7) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಟೆಮಾರು ಎಂಬಲ್ಲಿ ಗುರುವಾಯನಕೆರೆ ಕಡೆಯಿಂದ ಗೇರುಕಟ್ಟೆಗೆ ಹೋಗುತ್ತಿದ್ದ ಕೋಮಲಾಕ್ಷ ಅವರು ಚಲಾಯಿಸುತ್ತಿದ್ದ ಅಟೋರಿಕ್ಷಕ್ಕೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಚಿದಾನಂದ ಎಂಬವರು ಚಲಾಯಿಸುತ್ತಿದ್ದ ಮಾರುತಿ ಕಾರು ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಆಟೋರಿಕ್ಷಾ ಪಲ್ಟಿಯಾಗಿ ಮಗುಚಿ ಬಿದ್ದಿದೆ. ರಿಕ್ಷಾದಲ್ಲಿದ್ದವರು ಅದರ ಅಡಿಗೆ ಸಿಲುಕಿದ ಪರಿಣಾಮ ಎಲ್ಲ ಆರು ಮಂದಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆಗೆ ಕೋಮಲಾಕ್ಷ ಅವರ ಪತ್ನಿ ವೀಣಾ ಮೃತಪಟ್ಟಿದ್ದಾರೆ. ಉಳಿದವರನ್ನು ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಗಾಯಾಳುಗಳೆಲ್ಲರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.