×
Ad

ರಾಮದೇವ್ ಉದ್ಯಮ ಸಾಮ್ರಾಜ್ಯದಿಂದ ಯುವಜನತೆಗೆ ಬರಲಿದೆ ಹೊಸ ಉತ್ಪನ್ನ !

Update: 2016-09-11 23:14 IST

ಹರಿದ್ವಾರ, ಸೆ.11: ಟೆಲಿವಿಷನ್ ಯೋಗ ಗುರುವಾಗಿ ದೇಶಾದ್ಯಂತ ಜನಪ್ರಿಯತೆ ಗಳಿಸಿರುವ ಬಾಬಾ ರಾಮ್‌ದೇವ್ ತಮ್ಮ ಬಹುಕೋಟಿ ಸ್ವದೇಶಿ ಗ್ರಾಹಕವಸ್ತು ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ಹೊಸದಾಗಿ ಪರಿಧಾನ್ ಹೆಸರಿನಲ್ಲಿ ಹೊಸ ಸಿದ್ಧ ಉಡುಪು ಬ್ರಾಂಡ್ ಪರಿಚಯಿಸಲಿದ್ದಾರೆ. ಇದರಲ್ಲಿ ಜೀನ್ಸ್ ಹಾಗೂ ಕಚೇರಿಗೆ ಧರಿಸುವ ಪ್ಯಾಂಟ್‌ಗಳ ವೈವಿಧ್ಯಮಯ ಶ್ರೇಣಿ ಸೇರಿದೆ.

ಪತಂಜಲಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಮಿಂಚಿರುವ ಗಡ್ಡಧಾರಿ ಹಾಗೂ ಕೇಸರಿ ವಸ್ತ್ರ ಧರಿಸಿರುವ ಬಾಬಾ ರಾಮ್‌ದೇವ್, ಜಾಗತಿಕ ಮಟ್ಟಕ್ಕೆ ಲಗ್ಗೆ ಇಡುವ ಚಿಂತನೆ ನಡೆಸಿದ್ದು, ಬಾಂಗ್ಲಾದೇಶ ಹಾಗೂ ಆಫ್ರಿಕಾದಲ್ಲಿ ಘಟಕಗಳನ್ನು ತೆರೆಯಲು ನಿರ್ಧರಿಸಿದ್ದಾರೆ. ನಿಧಾನವಾಗಿ ಯೂರೋಪ್ ಹಾಗೂ ಅಮೆರಿಕನ್ ಮಾರುಕಟ್ಟೆಗೆ ಲಗ್ಗೆ ಇಡುವುದು ಇವರ ಉದ್ದೇಶವಾಗಿದೆ.

ಕೆಲ ಅನುಯಾಯಿಗಳು ಪತಂಜಲಿ ಯೋಗ ದಿರಿಸನ್ನು ಪರಿಚಯಿಸುವಂತೆ ಕೋರಿದ್ದಾರೆ. ಈ ಕಾರಣದಿಂದ ಇಡೀ ವೈವಿಧ್ಯಮಯ ಶ್ರೇಣಿಯ ಉಡುಪುಗಳನ್ನು ಏಕೆ ಪರಿಚಯಿಸಬಾರದು ಎಂಬ ಯೋಚನೆ ಬಂತು. ನಮ್ಮ ದೇಶಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಂದ ಆರ್ಥಿಕ ಸ್ವಾತಂತ್ರ್ಯವನ್ನು ತರಲು ನಾವು ಹೋರಾಡುತ್ತಿದ್ದು, ದೇಶೀಯ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಉತ್ತೇಜಿಸಬೇಕು. ಈ ಹಿನ್ನೆಲೆಯಲ್ಲಿ ನಾವು ಸಿದ್ಧ ಉಡುಪು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದೇವೆ ಎಂದು ಅವರು ಟೆಲೆಗ್ರಾಫ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪುರುಷರು ಹಾಗೂ ಮಹಿಳೆಯರ ದಿರಿಸನ್ನು ನಾವು ತಯಾರಿಸಲಿದ್ದೇವೆ. ಕೇವಲ ಸಾಂಪ್ರದಾಯಿಕ ಭಾರತೀಯ ಉಡುಗೆ ಮಾತ್ರವಲ್ಲದೇ, ಆಧುನಿಕ ಉಡುಗೆಯಾದ ಜೀನ್ಸ್‌ನಂಥ ಶ್ರೇಣಿಯನ್ನೂ ನಾವು ಪರಿಚಯಿಸುತ್ತೇವೆ. ನಾನು ಬಾಬಾ ಎಂಬ ಕಾರಣಕ್ಕೆ ಆಧುನಿಕ ಶೈಲಿಯೊಂದಿಗೆ ಆಧ್ಯಾತ್ಮಿಕತೆ ಹೊಂದಬಾರದು ಎಂಬ ಅರ್ಥವಲ್ಲ. ಇದನ್ನು ದೇಸಿ ಜೀನ್ಸ್ ಎಂದು ಕರೆಯಬಹುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News